ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮದ್ಯದ ನಶೆಯಲ್ಲಿದ್ದ ಚಾಲಕನೋರ್ವ ಮುಳ್ಳಿಕಟ್ಟೆಯಿಂದ ಯದ್ವಾ-ತದ್ವಾ ಗ್ಯಾಸ್ ಟ್ಯಾಂಕರ್ ಚಲಾಯಿಸಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರಿಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಮಧ್ಯಾಹ್ನ ಸುಮಾರಿಗೆ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಉಡುಪಿಗೆ ತೆರಳುತ್ತಿದ್ದ ಸ್ಥಳೀಯರಾದ ಪ್ರದೀಪ್ ಮುಳ್ಳಿಕಟ್ಟೆ, ತನ್ನ ಕಾರಿನಲ್ಲಿ ಟ್ಯಾಂಕರ್ ಒವರ್ ಟೇಕ್ ಮಾಡಿ ನಿಲ್ಲಿಸಲು ಸೂಚಿಸಿದ್ದರೂ ಮದ್ಯದ ನಶೆಯಲ್ಲಿದ್ದ ಟ್ಯಾಂಕರ್ ಚಾಲಕ ಸೀದಾ ಟ್ಯಾಂಕರ್ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ರಾ.ಹೆ. 66 ರ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆಯುತ್ತಾ ಸಾಗುತ್ತಿದ್ದ ಟ್ಯಾಂಕರನ್ನು ಹೆಮ್ಮಾಡಿ ಸರ್ಕಲ್ ಸಮೀಪ ನಿಲ್ಲಿಸಲು ಯತ್ನಿಸಿದಾಗ ಮತ್ತೆ ಮುಂದೆ ಸಾಗಿದ್ದು, ಬಳಿಕ ತಲ್ಲೂರು ಸರ್ಕಲ್ ಬಳಿ ಬೈಕ್ ಸವಾರರ ನೆರವಿನೊಂದಿಗೆ ಟ್ಯಾಂಕರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಕ್ಷಣವೇ ಪ್ರದೀಪ್ ಮುಳ್ಳಿಕಟ್ಟೆ ಪೊಲೀಸರಿಗೆ ಕರೆಮಾಡಿದ್ದು, ಕುಂದಾಪುರ ಸಂಚಾರಿ ಠಾಣೆಯ ಉಪನಿರೀಕ್ಷಕಿ ಸುಧಾ ಪ್ರಭು ಸ್ಥಳಕ್ಕೆ ಆಗಮಿಸಿ ಗ್ಯಾಸ್ ಟ್ಯಾಂಕರನ್ನು ವಶಕ್ಕೆ ಪಡೆದು ಚಾಲಕನನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.










