ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿವೈಡರ್’ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರವಾರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ನಾಯ್ಕ್ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ಜರುಗಿದೆ.
ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಕಾರು ನಾಗೂರಿನ ವೀರಾಂಜನೇಯ ದೇವಸ್ಥಾನದ ಎದುರು ಡಿವೈಡರ್ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದುದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ಕಾರು ಚಾಲಕನ ಕೈ ಬೆರಳುಗಳು ತುಂಡಾಗಿ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಗಾಯಾಳುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಮತ್ತೊಬ್ಬರಿಗೂ ಗಾಯಗಳಾಗಿದೆ.

ಘಟನೆ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರಕ್ಕೆ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳೀಯರು ಅಂಬುಲೆನ್ಸ್ ಮೂಲಕ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಹಕಾರ ನೀಡಿದ್ದಾರೆ.
ವಿಕಲಚೇತನರಾಗಿರುವ ಜಮಾತ್ ಮಾಜಿ ಅಧ್ಯಕ್ಷ ಉಬೈದುಲ್ಲಾ ಎಂ.ಏಚ್ ಅವರು ಹಾದು ಹೋಗುತ್ತಿದ್ದ ಆಂಬ್ಯುಲೆನ್ಸ್ ನಿಲ್ಲಿಸಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸ್ವತಃ ತಾನು ಜೊತೆಯಾಗಿ ಕರೆದುಕೊಂಡು ಹೋಗಿದ್ದಾರೆ. ಅಫಘಾತ ಸ್ಥಳದಲ್ಲಿ ತುಂಡರಿಸಿ ಬಿದ್ದಿದ್ದ ಎರಡು ಬೆರಳುಗಳನ್ನು ನಾಗೂರು ನಿವಾಸಿ ನತರ್ ಇವರು ಗಂಗೊಳ್ಳಿ ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಹಾಗೂ ಕೃಷ್ಣ ಇವರ ಆಂಬ್ಯುಲೆನ್ಸ್ ನಲ್ಲಿ ಕುಂದಾಪುರ ಆಸ್ಪತ್ರೆ ತನಕ ಶೀತಲೀಕೃತ ವ್ಯವಸ್ಥೆ ಮೂಲಕ ಕೊಂಡೊಯ್ದು ಕುಂದಾಪುರ ಸಂಚಾರ ಠಾಣೆಯ ಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯುತ್ತಿದ್ದ ಕಾರವಾರ ಮೂಲದ ಆಂಬ್ಯುಲೆನ್ಸ್ ಚಾಲಕನಿಗೆ ಹಸ್ತಾಂತರಿಸಿದರು.
ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿಎಸ್ಐ ಪವನ್ ನಾಯಕ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.















