ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಡಿದು ಬಂದು ಗಲಾಟೆ ಮಾಡಿದ ಪತಿ, ತನ್ನ ಪತ್ನಿಯನ್ನು ಕೈಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ವಂಡಾರು ಗ್ರಾಮದ ಕಟ್ಟೆಕೊಡ್ಲು ಎಂಬಲ್ಲಿ ನಡೆದಿದೆ.
ಕಟ್ಟೆಕೊಡ್ಲು ನಿವಾಸಿ ಅನಿತಾ (35) ಕೊಲೆಗೀಡಾಗಿದ್ದು, ತಲೆಮರೆಸಿಕೊಂಡಿರುವ ಅವರ ಪತಿ, ಕೊಲೆ ಆರೋಪಿ ಸುರೇಂದ್ರ ನಾಯ್ಕ(42) ಎಂಬಾತನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸುರೇಂದ್ರ ನಾಯ್ಕ ಸುಮಾರು 15 ವರ್ಷಗಳ ಹಿಂದೆ ಅನಿತಾ ಅವರನ್ನು ಮದುವೆ ಆಗಿದ್ದು, ಕಟ್ಟೆಕೊಡ್ಲುವಿನಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಕೊಂಡಿದ್ದ ಸುರೇಂದ್ರ ನಾಯ್ಕಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಪ್ರತಿದಿನ ಕುಡಿದು ಬರುತ್ತಿದ್ದ ಸುರೇಂದ್ರ ನಾಯ್ಕ, ಪತ್ನಿ ಮತ್ತು ಮಕ್ಕಳಿಗೆ ವಿಪರೀತವಾಗಿ ಹೊಡೆಯುತ್ತಿದ್ದನು ಎಂದು ದೂರಲಾಗಿದೆ.
ಈತ ಮೇ.17ರ ರಾತ್ರಿ ಮನೆಯಲ್ಲಿ ಅನಿತಾಗೆ ಕೈಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅನಿತಾ, ಸ್ಥಳದಲ್ಲಿಯೇ ಮೃತಪಟ್ಟರು. ಪತ್ನಿಯ ಕೊಲೆಗೈದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.