ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.19: ತಾಲೂಕಿನ ಬೀಜಾಡಿ ರಾಷ್ಟ್ರೀಯ ಹೆದ್ದಾರಿ ಬಸ್ಸು ತಂಗುದಾಣದ ಸಮೀಪದಲ್ಲಿರುವ ಉಪಾಧ್ಯಾಯ ಕಾಂಪ್ಲೆಕ್ಸ್‌ನಲ್ಲಿನ ಶ್ರೀ ದುರ್ಗಾ ಜ್ಯುವೆಲ್ಲರ‍್ಸ್‌ನ ಶೆಟರ್ ಮುರಿದು ಚಿನ್ನ-ಬೆಳ್ಳಿ ದೋಚಲು ಯತ್ನಿಸಿದ ಕಳ್ಳರ ಕೃತ್ಯ ಹಾಗೂ ಮನೆ ಮನೆಗೆ ಪತ್ರಿಕೆ ಹಾಕುವ ಹುಡುಗನ ಸಮಯ ಪ್ರಜ್ಞೆಯಿಂದ ಲಕ್ಷಾಂತರ ಮೌಲ್ಯದ ಭಾರೀ ಕಳ್ಳತನ ತಪ್ಪಿದಂತಾಗಿದೆ.
ಬುಧವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಕುಂಭಾಸಿ ಕಡೆಯಿಂದ ಶೀಪ್ಟ್ ಕಾರಿನಲ್ಲಿ ಬಂದ ದರೋಡೆಕೋರರ ತಂಡ ಬೀಜಾಡಿ ಐಸಿರಿ ಮೊಬೈಲ್ ಶಾಪ್‌ನ ಶೆಟರ್ ಮುರಿದು 15 ಸಾವಿರ ನಗದು, ಸುಮಾರು 25 ಸಾವಿರ ಬೆಲೆ ಬಾಳುವ ಮೊಬೈಲ್, 30 ಸಾವಿರ ಮೌಲ್ಯದ ಮೊಬೈಲ್ ಬಿಡಿಭಾಗಗಳನ್ನು ಕಳವು ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಬೀಜಾಡಿ ಅಜಯ ದಿನ ನಿತ್ಯ ತನ್ನ ಕಾಯಕದಂತೆ ಮನೆ ಮನೆಗೆ ಪೇಪರ್ ಹಾಕಲು ಬೈಸಿಕಲ್‌ನಲ್ಲಿ ಹೋಗುವಾಗ ಮನೆಯಿಂದ ಕೆಲವೇ ದೂರದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಮಾರಕಾಯುಧಗಳನ್ನು ಹಿಡಿದು ನಿಂತ ವ್ಯಕ್ತಿ ಹಾಗೂ ಮೊಬೈಲ್ ಶಾಪ್ ದರೋಡೆಗೊಂಡ ದೃಶ್ಯವನ್ನು ಕಂಡು ಜಾಗೃತನಾಗಿದ್ದಾನೆ. ಅಷ್ಟರಲ್ಲಿಯೇ ಮುಸುಕುಧಾರಿ ದರೋಡೆಕೊರನೊಬ್ಬ ಮಾರಕಾಯುಧಗಳನ್ನು ಹಿಡಿದು ಎಲ್ಲಿಯಾದರೂ ಯಾರಿಗಾದರೂ ವಿಷಯ ತಿಳಿಸಿದರೇ ಜಾಗೃತೆ ಎಂಬ ಬೆದರೆಕೆಯೊಡ್ಡಿ ಕಳ್ಳತನ ಕೆಲಸದಲ್ಲಿ ಮುಂದುವರಿದ್ದಾರೆ.
ಅಜಯ ಸ್ವಲ್ಪ ದೂರ ಹೋಗಿ ಕೊಡಲೇ ಸ್ಥಳೀಯ ಯುವಕರಿಗೆ ಕೃತ್ಯದ ಕುರಿತು ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ. ಕೊಡಲೇ ವಿಷಯ ತಿಳಿದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಬರುವ ವಾಹನಗಳ ಶಬ್ದ ಕೇಳಿ 3-4 ಜನ ಕಳ್ಳರು ಚಿನ್ನದ ಅಂಗಡಿಯ ಶೆಟರ್ ಮುರಿದು ಶೀಪ್ಟ್ ಕಾರು ಏರಿ ಪರಾರಿಯಾಗಿದ್ದಾರೆ.
ಕೃತ್ಯ ಏಸಗಿ ಕಾರು ಏರಿ ಹೋಗುತ್ತಿದ್ದ ದೃಶ್ಯವನ್ನು ಕಂಡ ಸ್ಥಳೀಯ ಕೆಲವು ಮಂದಿ ಯುವಕರು ಕಾರನ್ನು ಚೇಸ್ ಮಾಡಿದ್ದಾರೆ. ಕಾರು ಸೀದಾ ಹಾಲಾಡಿ ರಸ್ತೆಯ ಮೂಲಕ ಕತ್ತಲೆಯ ಪ್ರದೇಶದಲ್ಲಿ ಯಾವ ಕಡೆ ಹೋಯಿತು ಎಂದು ತಿಳಿಯದೇ ಬರಿಗೈಯಲ್ಲಿ ಸ್ಥಳೀಯರು ವಾಪಸ್ಸು ತೆರಳುವಂತಾಯಿತು.
ಕಳ್ಳತನ ಕೃತ್ಯಕ್ಕೆ ಬಳಸಿದ ಕಾರು ಚಿನ್ನದ ಅಂಗಡಿ ಕಡೆಗೆ ಬರುವ ದೃಶ್ಯ ಹಾಗೂ ಸಿಸಿ ಕ್ಯಾಮರವನ್ನು ತಿರುಗಿಸಿದ ದೃಶಗಳು ಸಿಸಿಯಲ್ಲಿ ಸೆರೆಯಾಗಿದೆ. ಎಲ್ಲಾ ಸಿಸಿ ಪೋಟೇಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕಳ್ಳತನ ಕೃತ್ಯ ನಡೆಯುವ ಕೆಲವು ಹೊತ್ತಿನ ಮುಂಚೆ ಕುಂದಾಪುರ ಸಂಚಾರಿ ಪಿಎಸ್‌ಐ ಸುಧಾಪ್ರಭು ಮತ್ತು ಸಿಬ್ಬಂದಿಗಳು ರಾತ್ರಿ ಗಸ್ತಿನಲ್ಲಿದ್ದು ಈ ಭಾಗದಲ್ಲಿ ತಿರುಗಾಡಿದ್ದಾರೆ. ಇದಲ್ಲದೇ ಕೃತ್ಯ ನಡೆದ ಕೆಲವೇ ನಿಮಿಷಗಳಲ್ಲಿ ಉಡುಪಿ ವಿಭಾಗದ ಹಿರಿಯ ಅಧಿಕಾರಿ ರಾತ್ರಿ ಕುಂದಾಪುರದಿಂದ ಉಡುಪಿಯ ಕಡೆ ಗಸ್ತಿನಲ್ಲಿದ್ದು ವಿಷಯ ತಿಳಿದ ಕೊಡಲೇ ಸ್ಥಳಕ್ಕೆ ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೀಜಾಡಿಯಲ್ಲಿನ ಜ್ಯುವೆಲ್ಲರಿ ಹಾಗು ಮೊಬೈಲ್ ಶಾಪ್ ಅಲ್ಲದೇ ಕೋಟೇಶ್ವರದ ಕಾಮತ್ ಪೆಟ್ರೋಲ್ ಬಂಕ್ ಎದುರಿನ ಜೋಯಿಸ್ ಕಾಂಪ್ಲೆಕ್ಸ್‌ನಲ್ಲಿರುವ ದಿನೇಶ್ ಆಚಾರ್ ಇವರ ಮಾಲಿಕತ್ವದ ಲಕ್ಷ್ಮೀ ಜ್ಯುವೆಲ್ಲರ‍್ಸ್ ಶಾಪ್‌ನ ಶೆಟರ್ ಮುರಿಯಲು ಪ್ರಯತ್ನ ಮಾಡಿದ್ದಾರೆ. ಇದಲ್ಲದೇ ಪಕ್ಕದಲ್ಲಿದ್ದ ಲೋಕೇಶ್ ಬಂಗೇರ ಇವರ ಕೋಲ್ ಡಿಂಕ್ಸ್ರ್ ಅಂಗಡಿಯ ಬಾಗಿಲು ಮುರಿದು 1 ಸಾವಿರ ನಗದು ಮತ್ತು ಸಿಗರೇಟ್‌ಗಳನ್ನು ದೋಚಿದ್ದಾರೆ.
ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್, ವೃತ್ತ ನೀರಿಕ್ಷಕ ಗೋಪಿಕೃಷ್ಣ, ಪಿಎಸ್‌ಐ ಸದಾಶಿವ ಗವರೋಜಿ, ಸುಧಾಪ್ರಭು, ಬೆರಳಚ್ಚು ತಂಡ, ಶ್ವಾನದಳ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಮೊಬೈಲ್ ಅಂಗಡಿ ಕಳ್ಳತನ ಗೊಂಡ ಕುರಿತು ಪ್ರಕರಣ ದಾಖಲಾಗಿದೆ.
ಕಣ್ಣೆದುರೇ ಕಳ್ಳತನ ನಡೆಯುತ್ತಿರುವುದನ್ನು ಕಂಡ ಕೊಡಲೇ ತನ್ನ ಜೀವದ ಹಂಗನ್ನು ತೊರೆದು ಸ್ಥಳೀಯ ಯುವಕರಿಗೆ ಸುದ್ದಿ ಮುಟ್ಟಿಸಿ ಮುಂದಾಗುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನದ ಕಳ್ಳತನವನ್ನು ತಡೆಗಟ್ಟಿದ ಕಾರಣಕ್ಕಾಗಿ ಹುಡುಗನ ಕ್ಷೀಪ್ರವಾದ ಕಾರ‍್ಯವೈಖರಿ ಕುರಿತು ವ್ಯಾಪಕವಾಗಿ ಸಾರ್ವಜನಿಕರಿಂದ ಪ್ರಂಶಸನೀಯ ಮಾತುಗಳು ಕೇಳಿ ಬಂದವು.