ಕುಂದಾಪ್ರ ಡಾಟ್ ಕಾಂ ಸುದ್ದಿ.
ಯುಎಇ: ಯತಿಶ್ರೇಷ್ಠ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವವು ಅರಬ್ ರಾಷ್ಟ್ರದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಕೆಲವು ಮನೆಗಳಲ್ಲಿ ಸೀಮಿತವಾಗಿ ನಡೆಯುತ್ತಿದ್ದ ಆರಾಧನಾ ಮಹೋತ್ಸವವನ್ನು ಅಗಸ್ಟ್ 14ರ ಭಾನುವಾರ ಯುಎಇ ಅಜ್ಮಾನ್ ಇಂಡಿಯನ್ ಅಸೋಸಿಯೇಷನ್’ನಲ್ಲಿ ಆಯೋಜಿಸಲಾಗಿದೆ.
ಧಾರ್ಮಿಕ ವಿಧಿಯಂತೆ ಆರಾಧನೆಯನ್ನು ಪೂರ್ತಿ ದಿವಸ ಅಚ್ಚುಕಟ್ಟಾಗಿ ನಡೆಸಿಕೊಡುವುದಕ್ಕೆ ಶ್ರೀಮಠದ ವತಿಯಿಂದ ದತ್ತಾತ್ರೆಯ ಜೋಶಿ ಗುರುಗಳು ಅವರ ಶಿಷ್ಯ ವೃಂದದ ಜೊತೆಗೆ ಆಗಮಿಸಲಿದ್ದಾರೆ.

ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವದ ವಿಶೇಷತೆಯನ್ನು ಹಾಗೂ ಸನಾತನ ಧರ್ಮದ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿಕೊಡಲು ಶತಾವಧಾನಿ ಆರ್. ಗಣೇಶ್ ಅವರ ಪ್ರಿಯ ಶಿಷ್ಯರಾದ ಅರ್ಜುನ್ ಭಾರದ್ವಾಜ್ ಅವರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಯರ ಅಭಿಲಾಷೆಯಂತೆ ಆರಾಧನಾ ಮಹೋತ್ಸವವನ್ನು ಯುಎಇ ಯಲ್ಲಿ ಮೊದಲ ಬಾರಿಗೆ ನಡೆಸಿಕೊಡಲು ಪ್ರಮುಖ ಪಾತ್ರವಹಿಸುತ್ತಿರುವ ವಿಜಯ್, ಸದನ್ ದಾಸ್ ಹಾಗೂ ಮಧು ಇವರುಗಳ ಭಕ್ತಿಶ್ರದ್ಧೆಗೆ ಯುಎಇ ಗುರುರಾಯರ ಭಕ್ತ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಕ್ತಿ ಶ್ರದ್ಧೆಯಿಂದ ನಡೆಯುತ್ತಿರುವ ಆರಾಧನಾ ಮಹೋತ್ಸವಕ್ಕೆ ರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಾಯರ ಸೇವೆಯಲ್ಲಿ ಪಾಲ್ಗೊಳ್ಳಬೇಕಾಗಿ ಕಾರ್ಯಕ್ರಮ ಆಯೋಜಕರು ಕೋರಿಕೊಂಡಿದ್ದಾರೆ.
ವರದಿ: ವಿಜಯ.ಜಿ















