ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಸಮಾಜವು ಎಲ್ಲ ವಿಧದ ದುಷ್ಚಟಗಳಿಂದ ಮುಕ್ತವಾದಾಗ ಗಾಂಧೀಜಿಯವರ ಕನಸಿನ ರಾಮರಾಜ್ಯ ಉದಯವಾಗುತ್ತದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಕಾರ್ಯವನ್ನು ಎಲ್ಲ ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕು ಎಂದು ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಉಡುಪಿ ಜಿಲ್ಲಾ ಹಾಗೂ ಬೈಂದೂರು ತಾಲೂಕು ಜನಜಾಗೃತಿ ವೇದಿಕೆ, ನವಜೀವನ ಸಮಿತಿಗಳು, ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ನಡೆದ ಜನಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಭವಿಷ್ಯದಲ್ಲಿ ಸಮಾಜದ ಎಲ್ಲರೊಂದಿಗೆ ಬೆರೆತು ಬಾಳಲು ಸಹಕಾರಿಯಾಗುವುದರ ಜತೆಗೆ ಸಂಸ್ಕಾರಯುತ ಜೀವನಕ್ಕೆ ನಾಂದಿಯಾಗುವ ಮೂಲಕ ವ್ಯಸನ ಮುಕ್ತ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಅಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ವ್ಯವಸ್ಥಿತ ರೀತಿಯ ಅನೇಕ ಮಾರ್ಗದರ್ಶನಗಳ ಮೂಲಕ ಪ್ರೇರೆಪಿಸಿ ಭವಿಷ್ಯದಲ್ಲಿ ಪರಿವರ್ತನೆ ಹೊಂದುವಲ್ಲಿ ಮತ್ತು ಹೊಸ ಬದುಕಿನ ಆಶಾಕಿರಣ ಮೂಡಿಸಲು ಶ್ರೀಕ್ಷೇತ್ರದ ವತಿಯಿಂದ ನಿಸ್ವಾರ್ಥ ಸೇವೆ ಮಾಡಲಾಗುತ್ತಿದೆ. ಇದರಿಂದ ವ್ಯಕ್ತಿ ಮಾತ್ರವಲ್ಲದೇ ಆತನ ಸಕಲ ಕುಟುಂಬವೇ ಬದಲಾವಣೆ ದಿಕ್ಕಿನಲ್ಲಿ ಸಾಗುತ್ತದೆ ಎಂದರು.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪಾನಮುಕ್ತ ಸಾಧಕರನ್ನು ಅಭಿನಂದಿಸಿದರು. ಇತ್ತಿಚಿನ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ, ದೋಣಿ ಕಳೆದುಕೊಂಡ ೪೫ ಕುಟುಂಬಗಳಿಗೆ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಸಹಾಯಧನ ವಿತರಿಸಿದರು.
ಶ್ರೀ ಕ್ಷೇಗ್ರಾಯೋ ಬಿ.ಸಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮೀನ್, ಕೊಲ್ಲೂರು ಗ್ರಾಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಬೈಂದೂರು ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ರಘೂರಾಮ ಕೆ. ಪೂಜರಿ, ಬೈಂದೂರು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ವಿವಿಧ ವಲಯಗಳ ಅಧ್ಯಕ್ಷರಾದ ಸತೀಶ್ ಎಂ. ನಾಯಕ್, ಮಹಾಬಲ ಪೋಜಾರಿ, ವಿಜಯ್ ಶೆಟ್ಟಿ, ಎಂ. ಆರ್. ಶೆಟ್ಟಿ, ವೆಂಕಟ ಪೂಜಾರಿ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಸ್ವಾಗತಿಸಿ, ಮೇಲ್ವಿಚಾರಕ ರಾಮ ವಂದಿಸಿದರು. ಜ್ಞಾನವಿಕಾಸದ ಗೀತಾ ಹಾಗೂ ವಲಯ ಮೇಲ್ವಿಚಾರಕ ರವಿಶಂಕರ್ ನಿರೂಪಿಸಿದರು.










