ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತೋಟದಲ್ಲಿ ಏಣಿ ಹಿಡಿದು ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. ಅವಘಡದಲ್ಲಿ ಉದ್ಯಮಿ, ಸಾಮಾಜಿಕ ಮುಂದಾಳು ಸತೀಶ ಸುಬ್ರಾಯ ಪ್ರಭು (52) ದಾರುಣವಾಗಿ ಮೃತಪಟ್ಟಿದ್ದಾರೆ.
ಬೆಳಿಗ್ಗೆ ತೋಟಕ್ಕೆ ಬಂದಿದ್ದ ಕೆಲಸದವರ ಜೊತೆ ತೆಂಗಿನಕಾಯಿ ಕಟಾವು ಮಾಡುತ್ತಿದ್ದ ವೇಳೆ ಏಣಿ ಪಕ್ಕಕ್ಕಿಡುವ ಸಂದರ್ಭ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ತಗುಲಿ ಈ ದುರ್ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ ಪವರ್ ಕಟ್ ಇರಲಿಲ್ಲ. ವಿದ್ಯುತ್ ತಂತಿಗಳು ಕೆಳಕ್ಕೆ ಜೋತು ಬಿದ್ದಿದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ.
ಶಿರೂರಿನಲ್ಲಿ ಹಲವು ವರ್ಷಗಳ ಕಾಲ ಪ್ರಭು ಡ್ರೆಸ್‌ಲ್ಯಾಂಡ್ ಬಟ್ಟೆ ಮಳಿಗೆ ನಡೆಸಿದ್ದ ಸತೀಶ್ ಪ್ರಭು ಅವರು ಸಾಮಾಜಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರೊಂದಿಗೂ ಅನ್ಯೂನ್ಯತೆಯಿದ್ದಿದ್ದರು.

ಶಿರೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸದಸ್ಯರಾದ ಸತೀಶ್ ಪ್ರಭು ಅವರು ಬಿಜೆಪಿ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದರು. ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾಗಿ, ಪೇಟೆ ವೆಂಕಟರಮಣ ದೇವಸ್ಥಾನದ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕೃಷಿಕಾರ್ಯದಲ್ಲಿಯೂ ತೊಡಗಿಕೊಂಡು ಪ್ರಗತಿಪರ ಕೃಷಿಕರೆನಿಸಿಕೊಂಡಿದ್ದರು.
ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ. ಶಿರೂರು ಪೇಟೆಯಲ್ಲಿ ಶೋಕ ಆವರಿಸಿದೆ.















