ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ “ಕೋಟಿ ಕಂಠ ಗಾಯನ” ಅಭಿಯಾನದ ಕಾರ್ಯಕ್ರಮ ಕುಂದಾಪುರದ ಗಾಂಧಿ ಮೈದಾನದಲ್ಲಿ ಶುಕ್ರವಾರ ಜರುಗಿತು.
ಕುಂದಾಪುರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸರಕಾರಿ ನೌಕರರು ಸೇರಿದಂತೆ ಸುಮಾರು 5000 ಮಂದಿ ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ್ದಾರೆ. ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ತಾಲೂಕು ಕ್ರೀಡಾ ಮತ್ತು ಯುವಜನ ಸೇವಾ ಅಧಿಕಾರಿ ಕುಸುಮಾಕರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಡಿವೈಎಸ್ಪಿ ಶ್ರೀಕಾಂತ್ ಕೆ., ಉಪತಹಶೀಲ್ದಾರ್ ವಿನಯ್ ಮೊದಲಾದವರು ಉಪಸ್ಥಿತರಿದ್ದರು.
ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಅವರ ಸಾರಥ್ಯದಲ್ಲಿ ಒಟ್ಟು ನಾಲ್ಕು ಗೀತೆಗಳನ್ನು ಹಾಡಲಾಯಿತು.
ಬಿಸಿಲಿಗೆ ತಲೆಸುತ್ತಿ ಬಿದ್ದ ವಿದ್ಯಾರ್ಥಿಗಳು:
ಬೆಳಿಗ್ಗೆ 11 ಗಂಟೆಯ ಬಿಸಿಲಿನ ಜಳಪಿಗೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಲೆಸುತ್ತಿ ಬಿದ್ದ ಘಟನೆಯೂ ನಡೆಯಿತು. ಈ ಪೈಕಿ ಇಬ್ಬರು ವಿದ್ಯಾರ್ಥಿಗಳಿಗೆ ಬಿಪಿ ಲೋ ಆಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹಾಗಾಗಿ 6 ಗೀತೆಗಳನ್ನು ಪೈಕಿ 4 ಗೀತೆಗಳನ್ನು ಹಾಡಿ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು.