ರಕ್ಷಾ ಕೋಟ್ಯಾನ್ | ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ: ಕಸವಾಗಿ ಹೋಗಬೇಕಿದ್ದ ವಸ್ತುಗಳಿಲ್ಲಿ ಸುಂದರ ಕಲಾಕೃತಿಗಳಾಗಿವೆ. ಕೃಷಿ ತ್ಯಾಜ್ಯಗಳಿಗೆ ಹೊಸ ರೂಪ ಕೊಟ್ಟು ಸಿದ್ಧಪಡಿಸಿದ ಕೃಷಿ ಕ್ರಾಫ್ಟ್‌ಗಳು ಕಲಾಸಕ್ತರ ಗಮನ ಸೆಳೆಯುತ್ತಿದೆ. ಜಾಂಬೂರಿಯಲ್ಲಿ ಮೂಡಬಿದಿರೆಯ ಯಶೋಧಾ ಪ್ರಭಾಕರ್ ಅವರು ತಯಾರಿಸಿರುವ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿವೆ.
ಗೃಹಿಣಿ ಯಶೋಧಾ ಪ್ರಭಾಕರ್ ಅವರು ತಮ್ಮ ತೋಟದ ಅಡಿಕೆ ಸಿಪ್ಪೆ, ತೆಂಗಿನ ಗರಿ ಹಾಗೂ ಕಡ್ಡಿಗಳು, ಅಡಿಕೆ ಹಾಳೆಗಳನ್ನು ಬಳಸಿಕೊಂಡು ಸುಂದರವಾದ ಹೂವಿನ ವಿನ್ಯಾಸವನ್ನು ತಯಾರಿಸಿ ತಮ್ಮ ಕಲಾಕೃತಿಯ ಮೂಲಕ ಗಮನ ಸೆಳೆದಿದ್ದಾರೆ.

ಕೃಷಿ ಕ್ರಾಫ್ಟ್ ಮಳಿಗೆಯಲ್ಲಿರುವ ಹೂವಿನ ವಿನ್ಯಾಸಗಳು, ವಾಲ್ ಹ್ಯಾಂಗಿಗ್ಸ್‌ಗಳು, ಕುಂಬಳಕಯಿ ಬೀಜ, ಸೌತೆಕಾಯಿ ಬೀಜಗಳನ್ನು ಒಣಗಿಸಿ ತಯಾರಿಸಿದ ಹೂವುಗಳು, ಅಡಿಕೆ ಹೂವಿನ (ಹಿಂಗಾರ) ಹಾಳೆಗಳು ಹಾಗೂ ಅಡಿಕೆ ತೊಟ್ಟಿನಿಂದ ತಯಾರಾದ ವಿಭಿನ್ನ ಬಗೆಯ ಮಾಲೆಗಳು, ಎಳೆ ತೆಂಗಿನ ಕಾಯಿಯ ಸಿಪ್ಪೆಯಿಂದ ಮೂಡಿಬಂದ ವಾಲ್ ಹ್ಯಾಂಗಿಗ್ಸ್, ಕೋಕೋ ಗಿಡದ ರೆಂಬೆಗಳಿಗೆ ಸಾಥ್ ನೀಡಿದ ಅಡಿಕೆ ಸಿಪ್ಪೆಯ ವಿನ್ಯಾಸಗಳಿಗೆ ಮನಸೋಲದವರಿಲ್ಲ. ಇವುಗಳಿಗೆ ಮರಳುಗಳನ್ನು ಬಳಸಿ ಬಣ್ಣಗಳಿಂದ ಅಲಂಕೃತಗೊಳಿಸಿದ್ದಾರೆ.
ಮೆಣಸಿನ ತೊಟ್ಟುಗಳನ್ನು ಹೂವಿನ ಕುಸುಮದ ರೀತಿಯಲ್ಲಿ ಬಳಸಿರುವುದು ಒಂದು ವಿಶೇಷವಾದರೆ, ಬಲಿತ ಬೆಂಡೆಕಾಯಿಯ ಸಿಪ್ಪೆಗಳನ್ನು ಉಪಯೋಗ ಮಾಡಿರುವುದು ಮತ್ತೊಂದು ವಿಶೇಷ. ಸಾಮಾನ್ಯ ಹೂಗಳು ಒಂದೆರಡು ದಿನಕ್ಕೆ ಬಾಡಿ ಹೋಗುತ್ತವೆ. ಆದರೆ ಈ ಹೂವುಗಳು ಎಷ್ಟು ವರ್ಷ ಕಳೆದರೂ ತಮ್ಮ ಕಾಂತಿಯನ್ನು ಕಳೆದುಕೊಳ್ಳುವುದಿಲ್ಲ. ಹದಿನೈದು ವರ್ಷ ಹಳೆಯದಾದ ಕ್ರಾಫ್ಟ್‌ಗಳು ಇಂದಿಗೂ ಹೊಸದರಂತೆಯೇ ಕಾಣಿಸುತ್ತಿರುವುದು ಈ ಕಲಾವಿದೆಯ ಕೈಚಳಕಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸಣ್ಣ ವಯಸ್ಸಿನಿಂದಲೂ ರಂಗೋಲಿ ಬಿಡಿಸುವ, ಹೂಕಟ್ಟುವುದರಲ್ಲಿ ಆಸಕ್ತಿ ಹೊಂದಿದ್ದ ಈ ಕಲಾವಿದೆ ಕಳೆದ ಹದಿನೈದು ವರ್ಷಗಳಿಂದ ಕೃಷಿ ಕ್ರಾಫ್ಟ್‌ಗಳನ್ನು ತಯಾರಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ, ಇವರ ಕ್ರಾಫ್ಟ್‌ಗಳಿಗೆ ವಿಶೇಷ ಗ್ರಾಹಕರಿದ್ದು ಇನ್ನೂರ ಐವತ್ತರಿಂದ ಒಂಬೈನೂರರ ಬೆಲೆಯ ಕ್ರಾಫ್ಟ್‌ಗಳು ಇವರ ಬಳಿ ಇದೆ.
ಸಮಯವನ್ನು ತೋರಿಸದೆ ಕೆಟ್ಟು ನಿಂತಿರುವ ಹಳೆಯ ಗಡಿಯಾರವನ್ನೂ ಕೃಷಿ ತ್ಯಾಜ್ಯದಿಂದ ಅಲಂಕರಿಸಿ, ಅದನ್ನು ವೀಕ್ಷಿಸುತ್ತಿರುವವರ ಮುಖದಲ್ಲಿ ಮಂದಹಾಸವನ್ನು ಸೃಷ್ಟಿಸುತ್ತಿದ್ದಾರೆ. ಯಾರ ಸಹಾಯವೂ ಇಲ್ಲದೆ ಏಕಾಂಗಿಯಾಗಿ ಈ ಕ್ರಾಫ್ಟ್‌ಗಳನ್ನು ತಯಾರಿಸಿರುವ 70ರ ಹರೆಯದ ಯಶೋದಾ ಅವರ ತಾಳ್ಮೆ, ಆಸಕ್ತಿ ಯುವ ಸಮೂಹಕ್ಕೆ ಉತ್ತಮ ಮಾದರಿ.
* ಕಡಿಮೆ ದರದಲ್ಲಿ ಕೈಗೆಟಕುತ್ತದೆ ಎಂಬ ಕಾರಣಕ್ಕೆ ಚೀನಾದ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತೇವೆ. ಆದರೆ ಈ ಕೃಷಿ ತ್ಯಾಜ್ಯಗಳ ಕ್ರಾಫ್ಟ್‌ಗಳು ಪರಿಸರಕ್ಕೆ ಯಾವುದೇ ಹಾನಿ ಉಂಟುಮಾಡದೆ, ಪೂರಕವಾಗುತ್ತದೆ. ಇಂತಹ ವಿನ್ಯಾಸಗಳನ್ನು ಯಾರೂ ತಯಾರಿಸದ ಕಾರಣ, ಆಸಕ್ತಿ ಇರುವವರಿಗೆ ಕಲಿಸಿಕೊಡುವ ಮಹದಾಸೆ ಇದೆ. ಈ ಕಲೆ ನನ್ನಲ್ಲೇ ಅಂತ್ಯವಾಗಬಾರದು. ವಿಶೇಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಗಮನಕ್ಕೆ ತಂದು, ರುಡ್‌ಸೆಟ್‌ನಲ್ಲಿ ತರಬೇತಿ ನೀಡಬೇಕೆಂಬ ಹಂಬಲವಿದೆ. – ಯಶೋಧಾ ಪ್ರಭಾಕರ್
- ವರದಿ: ರಕ್ಷಾ ಕೋಟ್ಯಾನ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ.
- ಚಿತ್ರ; ಅರ್ಪಿತ್ ಇಚ್ಛೆ















