ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ದಾಖಲಾತಿ ಗಣನೀಯವಾಗಿ ಇಳಿದಿದೆ. ಆಂಗ್ಲ ಮಾಧ್ಯಮ ಶಾಲೆಗಳ ಮೋಹಕ್ಕೆ ಒಳಗಾಗಿರುವ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಾತಿ ಮಾಡುತ್ತಿದ್ದಾರೆ. ಮಕ್ಕಳಿಗೆ ವ್ಯವಹಾರಿಕವಾಗಿ ಆಂಗ್ಲ ಭಾಷೆಯ ಅವಶ್ಯಕತೆ ಇದೆಯೇ ಹೊರತು ಜೀವನದಲ್ಲಿ ಆಂಗ್ಲ ಭಾಷೆ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಇಂದು ಉನ್ನತ ಹುದ್ದೆಯಲ್ಲಿ, ಸ್ಥಾನಮಾನ ಪಡೆದುಕೊಂಡಿದ್ದಾರೆ ಎಂದು ಕರ್ಣಾಟಕ ಬ್ಯಾಂಕ್ ಆದಿ ಉಡುಪಿ ಶಾಖೆಯ ವ್ಯವಸ್ಥಾಪಕ ಬಿ. ರವೀಂದ್ರ ಶ್ಯಾನುಭಾಗ್ ಹೇಳಿದರು.
ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಬೆಳ್ಳಿ ಹಬ್ಬದ ಪ್ರಯುಕ್ತ ಶಾಲೆಯ ಟಿ.ವಿಮಲಾ ವಿ.ಪೈ ಸಭಾಗೃಹದಲ್ಲಿ ಶನಿವಾರ ಜರಗಿದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಯೋಜನೆ ರೂಪಿಸಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ಶಾಲೆಯ ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ರೂಪಶ್ರೀ ಆಚಾರ್ಯ, ಶಾಲಾ ವಿದ್ಯಾರ್ಥಿ ನಾಯಕ ರಮಿತ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಮಹಾಬಲ ಆಚಾರ್ಯ ಸ್ವಾಗತಿಸಿದರು. ಶಿಕ್ಷಕರಾದ ದೇವ್ ವರದಿ ವಾಚಿಸಿದರು.
ರೇಖಾ ಖಾರ್ವಿ ಅತಿಥಿಗಳನ್ನು ಪರಿಚಯಿಸಿದರು. ಭೂದೇವಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮಾಲಾಶ್ರೀ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ವಂದಿಸಿದರು.