ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಧ್ಯಾತ್ಮ ರಹಸ್ಯ ಮಾಸಪತ್ರಿಕೆ, ಬೀಜಾಡಿ ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಕಲಾ ಸಂಘ, ಕೋಟೇಶ್ವರ ಓಂಶಾಂತಿ ಪ್ರೊಡೆಕ್ಷನ್, ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಪತ್ರಿಕಾ ಕೃಷಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ ಹಾಗೂ 10 ಸಾವಿರ ನಗದು ಪುರಸ್ಕಾರಕ್ಕೆ ವಿಜಯವಾಣಿ ಹಿರಿಯ ವರದಿಗಾರ ಆರ್. ಶ್ರೀಪತಿ ಹೆಗಡೆ ಹಕ್ಲಾಡಿ ಆಯ್ಕೆ ಆಗಿದ್ದಾರೆ.
ನೇರ, ದಿಟ್ಟ ವರದಿಗಾರಿಕೆಯ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಅವರ ಹತ್ತಾರು ವರದಿಗಳು ಮಹತ್ತರ ಸಾಮಾಜಿಕ ಬದಲಾವಣೆಗೆ ಕಾರಣವಾಗಿರುವುದಲ್ಲದೇ, ಆಡಳಿತಯಂತ್ರವನ್ನು ನಿರಂತರವಾಗಿ ಎಚ್ಚರಿಸುತ್ತಲೇ ಬಂದಿದೆ.
ಹಕ್ಲಾಡಿ ಅವರಿಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯು ಕೊಡಮಾಡುವ `ಕಡಲ ತೀರದ ಭಾರ್ಗವ ಡಾ. ಕೆ. ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’, ಮಾನವ ಹಕ್ಕು ಮಂಡಳಿ- ಬೆಂಗಳೂರು ಸಂಸ್ಥೆಯು ಕೊಡಮಾಡುವ ರಾಜ್ಯ ಮಟ್ಟದ ‘ಟಿಪ್ಪು ಸುಲ್ತಾನ್ ಸದ್ಭಾವನಾ ಪ್ರಶಸ್ತಿ’, ಬಿಜಾಪುರದ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಕೋಡಮಾಡುವ ‘ಬಸವ ಜ್ಯೋತಿ ರಾಜ್ಯ ಪ್ರಶಸ್ತಿ’, ಕಾರ್ಮಿಕ ವೇದಿಕೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.
ಜ.27, ಸಂಜೆ 5ಕ್ಕೆ ನಡೆಯುವ ನಮ್ಮೂರ ಹಬ್ಬ ಗೋಪಾಡಿ ಗೆಂಡೋತ್ಸವ ವೇದಿಕೆಯಲ್ಲಿ ಕೇಮಾರು ಸಾಂದೀಪನಿ ಸಾಧನಾ ಆಶ್ರಮ ಶ್ರೀ ಈಶವಿಠಲದಾಸ್ ಸ್ವಾಮೀಜಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕನ್ನಡ ಚಲನಚಿತ್ರ ನಟ ರಮೇಶ್, ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯಕ್, ಬೀಜಾಡಿ ಗೋಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ಶ್ರೀ ಚಿಕ್ಕುಅಮ್ಮ ಸಪರಿವಾರ ದೇವಸ್ಥಾನ ಆಡಳಿತ ಮೊಕ್ತೇಸರ ಆನಂದ ಬಿಳಿಯ, ಮುಂಬೈ ನಾಗರಾಜ ಆರ್.ಸುವರ್ಣ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪರಿಸರದ 4 ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ, ಮಂಜುನಾಥ ಕುಂದಾಪುರ ಹಾಸ್ಯ ಸಿಂಚನ, ಭಜನೆ, ಸುಗಮ ಸಂಗೀತ, ನೃತ್ಯ, ಸಾಂಸ್ಕೃತಿ ಸಂಜೆ, ಯಕ್ಷಗಾನ ನಡೆಯಲಿದೆ ಎಂದು ತಾಲೂಕು ಪತ್ರಕರ್ತ ಸಂಘ ಅಧ್ಯಕ್ಷ ಸತೀಶ್ ಕುಮಾರ್ ತಿಳಿಸಿದ್ದಾರೆ.