ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ.ಜ.22: ಕೊಪ್ಪಳದಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯೊಂದು ಡಿವೈಡರ್ ಗುದ್ದಿ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ಕುಂದಾಪುರದ ಸಂಗಮ್ ಜಂಕ್ಷನ್ ಬಳಿ ಭಾನುವಾರ ಸಂಜೆ ನಡೆದಿದೆ. ಚಾಲಕ ಪಾನಮತ್ತನಾಗಿ ಲಾರಿ ಚಲಾಯಿಸಿರುವುದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಸಿಮೆಂಟ್ ಲೋಡ್ ಆಗಿದ್ದ 14 ಚಕ್ರದ ಲಾರಿಯನ್ನು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದಾನೆ. ಸಂಗಮ್ ಬಳಿ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡ ಲಾರಿ ಹೆದ್ದಾರಿ ಬಲಭಾಗದ ಡಿವೈಡರ್ ಡಿಕ್ಕಿಯಾಗಿ ರಸ್ತೆ ಮೇಲೆಯೇ ಉರುಳಿ ಬಿದ್ದಿದೆ. ಈ ವೇಳೆ ಕುಂದಾಪುರ ಕಡೆಯಿಂದ ತ್ರಾಸಿ ತೆರಳುತ್ತಿದ್ದ ಕಾರೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಈ ಮೊದಲು ಲಾರಿ, ರಸ್ತೆ ಬದಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾಗಳಿಗೆ ಡಿಕ್ಕಿ ಹೊಡೆದಿದ್ದು ಹಾನಿಯುಂಟಾಗಿದೆ.
ಅಪಘಾತದಿಂದ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ವಾಹನಗಳಿಗೆಸರ್ವೀಸ್ ರಸ್ತೆ ಮೂಲಕ ತೆರಳಲು ಅನುವು ಸಂಚಾರಿ ಪೊಲೀಸರು ಅನುವು ಮಾಡಿಕೊಟ್ಟರು. ಮೂರು ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲೆತ್ತಿ, ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.