ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರಕಾರವು ರಾಜ್ಯ ಸರಕಾರದ ಸಹಯೋಗದೊಂದಿಗೆ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ವಯ ಗ್ರಾಮದ ಪ್ರತಿಯೊಂದು ಮನೆ ಮನೆಗೂ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಿ, ಪ್ರತಿಯೊಬ್ಬರಿಗೆ ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರು ನೀಡಲು ಉದ್ದೇಶಿಸಲಾಗಿದೆ. ಇದೊಂದು ಉತ್ತಮ ಯೋಜನೆಯಾಗಿದ್ದು ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಜಲಜೀವನ್ ಮಿಷನ್ ಸಹಾಯಕ ಅಭಿಯಂತರ ಟಿ.ಗಿರೀಶ್ ಹೇಳಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿದ ಜಲಜೀವನ್ ಮಿಷನ್ ವಿಶೇಷ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಗಂಗೊಳ್ಳಿ ಗ್ರಾಮ ಪಂಚಾಯತ್ಗೆ ಸುಮಾರು ೪.೮೫ ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಎರಡು ಓವರ್ ಹೆಡ್ ಟ್ಯಾಂಕ್ ಸಹಿತ ೧೫ ಕಿ.ಮೀ ಹೊಸ ಪೈಪ್ ಪೈನ್ ಅಳವಡಿಕೆಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಪಿಎಂಸಿ ಇಂಜಿನಿಯರ್ ಸಾತ್ವಿಕ್ ಹೆಗ್ಡೆ ಹೇಳಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಪಿಡಿಒ ಉಮಾಶಂಕರ, ಸುಪ್ರದಾ ಕನ್ಸ್ಟ್ರಕ್ಷನ್ ಕಂಪೆನಿಯ ಇಂಜಿನಿಯರ್ ಗೌತಮ್ ನಾಯಕ್, ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಸದಸ್ಯರು, ಗ್ರಾಮಸ್ಥರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.