ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ’ಜಾಗತಿಕವಾಗಿ ಸೌಂದರ್ಯ ಪ್ರಜ್ಞೆ ಹೆಚ್ಚಿದ್ದು, ವಿನ್ಯಾಸ ಕ್ಷೇತ್ರದಲ್ಲೂ ಅವಕಾಶಗಳು ವಿಪುಲವಾಗಿವೆ. ವಿನ್ಯಾಸದ ಸೃಜನಶೀಲತೆ ಹಾಗೂ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡರೆ ಅವಕಾಶಗಳು ಹೇರಳವಾಗಿವೆ’ ಎಂದು ಹಿರಿಯ ಗ್ರಾಫಿಕ್ ವಿನ್ಯಾಸಗಾರ ತಿಮ್ಮೇಶ್ ಮಲ್‌ಶೆಟ್ಟಿ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ’ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆ ಗುರುವಾರ ಹಮ್ಮಿಕೊಂಡಿದ್ದ ಪುಟ ವಿನ್ಯಾಸ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
’ನಡೆಯುವವರು ಎಡವುತ್ತಾರೆಯೇ ಹೊರತು ಕುಳಿತವರಲ್ಲ. ಹೀಗಾಗಿ ಏಳುಬೀಳುಗಳ ಬಗ್ಗೆ ಚಿಂತಿಸಬಾರದು. ತಪ್ಪಿನಿಂದಲೇ ನಾವು ತಿಳಿದುಕೊಳ್ಳಲು ಸಾಧ್ಯ. ಹೊಸತನವನ್ನು ಬೆಳೆಸಿಕೊಳ್ಳಲು ಸಾಧ್ಯ ಜೀವನವೇ ಒಂದು ಪ್ರಯೋಗಾಲಯ. ಪ್ರತಿನಿತ್ಯ ಪ್ರಯತ್ನಿಸಿ’ ಎಂದರು.
’ನಮ್ಮ ನಿತ್ಯದ ನಡವಳಿಕೆಯ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಯಾವುದೇ ಕೃತಿಯನ್ನು ನೋಡಲು ಸುಲಭ. ಆದರೆ, ಆ ಕೆಲಸದ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ. ಪರಿಶ್ರಮದಿಂದ ಪರಿಪೂರ್ಣತೆ ಹೊಂದಲು ಸಾಧ್ಯ’ ಎಂದ ಅವರು, ’ಇನ್‌ಡಿಸೈನ್, ಇಲ್ಲಸ್ಟ್ರೇಟರ್, ಫೋಟೊಶಾಪ್ ಸೇರಿದಂತೆ ವಿನ್ಯಾಸದ ವಿವಿಧ ಸಾಫ್ಟ್‌ವೇರಗಳ ಬಳಕೆಯ ಪ್ರಾತ್ಯಕ್ಷಿಕೆ ನೀಡಿದರು.
’ಈಗ ಕೇವಲ ಸುದ್ದಿ ನೀಡಿದರೆ ಸಾಲದು. ಅದು ಕ್ಷಣದಲ್ಲಿ ಓದುಗರನ್ನು ಸೆಳೆಯುವಂತೆ ವಿನ್ಯಾಸ ನೀಡುವುದೂ ಅವಶ್ಯ. ಈ ಕೆಲಸಗಳಿಗೆ ಸೃಜನಶೀಲತೆ ಜೊತೆ ಸಂಯಮ ಅತಿಮುಖ್ಯ’ ಎಂದ ಅವರು ಕ್ಷೇತ್ರದಲ್ಲಿನ ತಮ್ಮ ಅನುಭವ ಹಂಚಿಕೊಂಡರು.
ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ’ವಿದ್ಯಾರ್ಥಿಗಳಿಗೆ ಕ್ಷೇತ್ರದ ತಜ್ಞರ ಜೊತೆಗಿನ ಸಂವಹನವು ಅತಿ ಅವಶ್ಯವಾಗಿದೆ. ಇದು ವೃತ್ತಿಪರತೆ ಹೆಚ್ಚಿಸಲು ಸಹಕಾರಿಯಾಗಿದೆ’ ಎಂದರು.
ಅಭಿವ್ಯಕ್ತಿ ವೇದಿಕೆಯ ವಿದ್ಯಾರ್ಥಿ ಸಂಯೋಜಕಿ ದಿಶಾ, ವಿಭಾಗದ ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ಸುಶ್ಮಿತಾ ಜಯಾನಂದ, ಹರ್ಷವರ್ಧನ ಪಿ.ಆರ್, ನಿಶಾನ್ ಕೋಟ್ಯಾನ್, ದೀಕ್ಷಿತಾ ಇದ್ದರು. ವಿದ್ಯಾರ್ಥಿಗಳಾದ ಕವನ ಕಾಂತಾವರ ನಿರೂಪಿಸಿ, ಅವಿನಾಶ್ ವಂದಿಸಿದರು.