ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಅಭಿನಯ ವಿಶಾರದ, ರಂಗಸ್ಥಳದ ರಾಜ ಮೊದಲಾದ ಬಿರುದುಗಳಿಂದ ಖ್ಯಾತರಾಗಿರುವ ಯಕ್ಷಗಾನದ ಸವ್ಯಸಾಚಿ ಕಲಾವಿದ 7 ದಶಕಗಳ ವೃತ್ತಿಪರ ತಿರುಗಾಟ ನಡೆಸಿರುವ ಅರುವ ಕೊರಗಪ್ಪ ಶೆಟ್ಟಿ ಅವರು ಪುನರೂರಿನಲ್ಲಿ ಮಾ.5 ರಂದು ನಡೆಯುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯಕ್ಷಗಾನ ಕಲಾವಿದರಿಗೆ, ಕಲೆಗೆ ಗೌರವ ನೀಡುವುದಕ್ಕೆ ಮತ್ತು ರಂಗದಲ್ಲಿ ಅರುವ ಅವರ ಆಶು ಸಾಹಿತ್ಯಕ್ಕೆ ಗೌರವವಾಗಿ ಈ ಆಯ್ಕೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ.
84 ರ ಹರೆಯದ ಅವರು ಪ್ರಸ್ತುತ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಹಿರಿಯಡ್ಕ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ. ತೆಂಕುತಿಟ್ಟಿನ ಪ್ರತಿನಾಯಕ ಪಾತ್ರಧಾರಿಯಾಗಿ ತುಳು ಮತ್ತು ಕನ್ನಡ ಭಾಷೆಯ ಪ್ರದರ್ಶನಗಳಲ್ಲಿ ಅದ್ಬುತ ಪ್ರತಿಭೆ ಮೆರೆದಿದ್ದಾರೆ.
ಬಬ್ಬಯ್ಯ ಶೆಟ್ಟಿ ಮತ್ತು ಕಾಂತಕ್ಕೆ ದಂಪತಿಯ ಸುಪುತ್ರರಾಗಿ ಅರುವದಲ್ಲಿ 1940 ನವಂಬರ್ 24 ರಂದು ಜನಿಸಿದರು. ಕೊರಗಪ್ಪ ಶೆಟ್ಟರು ಪ್ರಾಥಮಿಕ ಹಂತದವರೆಗೆ ಶಿಕ್ಷಣ ಪಡೆದಿದ್ದು ಅನುಭವಿ ಕಲಾವಿದರಾಗಿ ಮೆರೆಯುತ್ತಿದ್ದಾರೆಬಾಲ್ಯದಲ್ಲಿ ಯಕ್ಷಗಾನದತ್ತ ಆಕರ್ಷಿತರಾದ ಇವರು ಅಧ್ಯಾಪಕರಾಗಿದ್ದ ವೆಂಕಟರಮಣ , ಕೃಷ್ಣರಾಜ ಅಜಿಲ, ಮುತ್ತಯ್ಯ ಹೆಗಡೆ ಮೊದಲಾದವರ ಪ್ರೋತ್ಸಾಹದೊಂದಿಗೆ ಪಡ್ರೆ ಚಂದುರವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿ ಯಕ್ಷಗಾನ ರಂಗಕ್ಕೆ ಪ್ರವೇಶಿಸಿದರು.
ಬಾಲಗೋಪಾಲ ವೇಷದಿಂದ ಎದುರು ವೇಷದವರೆಗೆ ಹಂತ ಹಂತವಾಗಿ ಬೆಳೆಯುತ್ತಾ ಬಂದ ಕೊರಗಪ್ಪ ಶೆಟ್ಟರು 7 ದಶಕಗಳಿಂದ ಮೇಳದ ತಿರುಗಾಟವನ್ನು ನಡೆಸುತ್ತಿದ್ದಾರೆ. ಕಟೀಲು ಮೇಳ – 3ವರ್ಷ, ಶ್ರೀ ಕುತ್ಯಾಳ ಮೇಳ – 2 ವರ್ಷ, ಕುಂಡಾವು ಮೇಳ – 7 ವರ್ಷ. ಕರ್ನಾಟಕ ಮೇಳ 31 ವರ್ಷ, ಎಡನೀರು 1 ವರ್ಷ, ಮುಲ್ಕಿ ಮೇಳ , ಮಂಗಳಾದೇವಿ 14 ವರ್ಷ -ಮೇಳಗಳ ತಿರುಗಾಟದಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ನೂತನ ಪ್ರಸಂಗಗಳ ಪಾತ್ರಗಳಿಗೂ ಜೀವ ತುಂಬಿದ ಕಲಾವಿದರು.
ಕಂಸ, ಕೌರವ, ಕರ್ಣ, ಇಂದ್ರಜಿತು ಇತ್ಯಾದಿ ಖಳ ನಾಯಕನ ಪಾತ್ರಗಳಲ್ಲಿ ಮಿಂಚಿದ್ದಾರೆ. ವಿಷ್ಣು, ಬಬ್ರುವಾಹನ, ಸುಧನ್ವ, ದ್ರೋಣ, ಕೃಷ್ಣ, ವಿಶ್ವಾಮಿತ್ರ, ರೂಕ್ಷ ಮೊದಲಾದ ಭಿನ್ನ ಸ್ವಭಾವದ ಪಾತ್ರಗಳನ್ನೂ ಸೊಗಸಾಗಿ ನಿರ್ವಹಿಸುತ್ತಾರೆ.
ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸುತ್ತಾ ಇದ್ದಾಗ ಪ್ರತಿನಾಯಕ ಪಾತ್ರಗಳಿಗೆ ತನ್ನದೇ ಆದ ಶೈಲಿಯನ್ನು ತೋರಿ ಆದ್ವಿತೀಯ ಸ್ಥಾನಕ್ಕೇರಿದರು. ಪಾತ್ರದ ಸ್ಥಭಾವವನ್ನು ಅರಿತು ಅದಕ್ಕೆ ತಕ್ಕಂತೆ ಅಭಿನಯಿಸುವುದರಿಂದ ಇವರ ಕೋಟಿ, ದೇರಣ್ಣೆ, ದೇವುಪೂಂಜ, ಕಾಂತುಪೂಂಜ ಮೊದಲಾದ ಪಾತ್ರಗಳೆಲ್ಲವೂ ಜನಮಾನಸಕ್ಕೆ ಮುಟ್ಟಿದೆ. ಅಕ್ಷಯಾಂಬರ ವಿಲಾಸ ಪ್ರಸಂಗದಲ್ಲಿ ಇವರು ಮಾಡುವ ದುಶ್ಯಾಶನನ ಪಾತ್ರ ಸರ್ವರಿಂದಲೂ ಮುಕ್ತ ಪ್ರಶಂಸೆಗೆ ಒಳಗಾಗಿದೆ.
ಮಳೆಗಾಲದಲ್ಲಿ ಕೃಷಿಯ ಬಗ್ಗೆ ಶ್ರಮಿಸುವ ಮನೋಧರ್ಮವುಳ್ಳವರು. ಮಹಾಲಕ್ಷ್ಮೀ ಅವರ ಮಡದಿ. ವತ್ಸಲ, ದೇವಿಪ್ರಸಾದ್ ಇಬ್ಬರು ಮಕ್ಕಳು.
ಬೇಸಿಗೆ ಮತ್ತು ಮಳೆಗಾಲದ ಪ್ರದರ್ಶನಗಳಲ್ಲಿ ಬೇಡಿಕೆಯ ಕಲಾವಿದರಾಗಿರುವ ಇವರ ಸಾಧನೆಗೆ ಪ್ರತಿಫಲವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಸಮಗ್ರ ಯಕ್ಷಗಾನ ಸಮ್ಮೇಳನ ಪ್ರಶ ಸ್ತಿ ಸಹಿತ 200 ಕ್ಕೂ ಹೆಚ್ಚು ಪ್ರಶಸ್ತಿ- ಸಂಮಾನಗಳು ಸಂದಿವೆ. ಎಡನೀರು ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ಉಡುಪಿ ಕಲಾರಂಗದ ಪ್ರಶಸ್ತಿ, ವಿಶ್ವ ತುಳುವ ಪ್ರಶಸ್ತಿ ಮುಂತಾದುವುಗಳನ್ನು ಉಲ್ಲೇಖಿಸ ಬಹುದು. ಮಸ್ಕತ್,ದುಬಾಯಿ, ಬೆಹರಿನ್, ಮೊದಲಾದ ಕಡೆಗಳಲ್ಲೂ ಅಭಿಮಾನಿಗಳ ಸಂಘಟನೆಯಲ್ಲಿ ಸಂಮಾನಗಳು ಸಂದಿವೆ.