ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ಸರ್ವ ತಯಾರಿಗಳು ನಡೆಯುತ್ತಿದ್ದು, ಈ ನಡುವೆ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ಉಡುಪಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬೈಂದೂರು ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಿರಣ್ ಕುಮಾರ್ ಕೊಡ್ಗಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ವಿ. ಸುನಿಲ್ ಕುಮಾರ್, ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯಶಪಾಲ್ ಸುವರ್ಣ, ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಕಣಕ್ಕಿಳಿಸಲಾಗುತ್ತಿದೆ.
ಬೈಂದೂರು ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿಯ ರಘುಪತಿ ಭಟ್ ಹಾಗೂ ಕಾಪುವಿನ ಲಾಲಾಜಿ ಆರ್. ಮೆಂಡನ್ ಅವರಿಗೆ ಟಿಕೆಟ್ ಮಿಸ್ ಆಗಿದೆ.
ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಅರುಣ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಜಾಪ್ರಭುತ್ವ ಪಕ್ಷವಾಗಿ ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. 31 ಜಿಲ್ಲೆಯಲ್ಲೂ ಅಭಿಪ್ರಾಯ ಪಡೆದಿದೆ. 25,೦೦೦ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಜಿಲ್ಲಾ ನಾಯಕರಿಂದಲೂ ಅಭಿಪ್ರಾಯ ಪಡೆಯಲಾಗಿದೆ. ಎಲ್ಲ ರಾಷ್ಟ್ರೀಯ ಪ್ರಮುಖ ನಾಯಕರ ಇನ್ ಪುಟ್ ಪಡೆದುಕೊಂಡಿದೆ ಎಂದರು.
ರಾಜ್ಯ ಬಿಜೆಪಿ ಮೊದಲ ಪಟ್ಟಿಯಲ್ಲಿ ಒಟ್ಟು 189 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸಿದೆ. ಒಬಿಸಿ 32, ಎಸ್.ಸಿ 30, ಎಸ್.ಟಿ 16 ಅಭ್ಯರ್ಥಿಗಳು ಹಾಗೂ 52 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ವೈದ್ಯರು, ವಕೀಲರು, ನಿವೃತ್ತ ಐಎಎಸ್ ಐಪಿಎಸ್, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು, ಸಾಮಾಜಿಕ ಕಾರ್ಯಕರ್ತರೂ ಸೇರಿದಂತೆ ವಿವಿಧ ವೃತ್ತಿ ಉದ್ಯಮದಲ್ಲಿರುವವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.