ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿಯೋಗ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಘಕ್ಕೆ ಸೋಮವಾರ ಭೇಟಿ ನೀಡಿತು.
ಸಹಕಾರಿಯ ಅಭಿವೃದ್ಧಿಗೋಸ್ಕರ ಅಧ್ಯಯನ ಪ್ರವಾಸದ ನಿಮಿತ್ತ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಗೆ ಭೇಟಿ ನೀಡಿದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಹಾಗೂ ೧೦ ಶಾಖೆಗಳ ಶಾಖಾ ವ್ಯವಸ್ಥಾಪಕರನ್ನೊಳಗೊಂಡ ತಂಡ, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಘದಲ್ಲಿ ಸಾಲ ನೀಡುವ ದಾಖಲೆ ಪತ್ರಗಳ ಮಾಹಿತಿ, ಸಾಲ ವಸೂತಿ, ಸಹಕಾರಿಯ ಬೆಳವಣಿಗೆ ಕೈಗೊಳ್ಳಲಾದ ಕ್ರಮಗಳು, ಠೇವಣಿ ಸ್ವೀಕಾರ, ಸಂಘವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಿ ಮಾಹಿತಿಗಳನ್ನು ಪಡೆದುಕೊಂಡರು.
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಗೌ.ತಡಸನವರ, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಪಾರದರ್ಶಕವಾಗಿ ಆಡಳಿತ ನಿರ್ವಹಿಸಿದೆ. ತನ್ಮೂಲಕ ಸದಸ್ಯರ ಪ್ರೀತಿ ವಿಶ್ವಾಸ ಗಳಿಸಿ ವಿಶಿಷ್ಟ ಯೋಜನೆ, ಕಾರ್ಯಕ್ರಮಗಳ ಮೂಲಕ ಮತ್ತು ವಿಶೇಷವಾಗಿ ಸೇವೆಯ ಮೂಲಕ ರಾಜ್ಯ ಮಟ್ಟದಲ್ಲೇ ಹೆಸರುಗಳಿಸಿದೆ. ಇಂತಹ ಸಂಸ್ಥೆಗೆ ಅಧ್ಯಯನ ಪ್ರವಾಸ ಹಮ್ಮಿಕೊಂಡಿರುವುದು ನಮ್ಮೆಲ್ಲರ ಭಾಗ್ಯ. ಇದರ ಮೂಲಕ ಅನೇಕ ಪ್ರಯೋಜನ ನಮಗಾಗಿದೆ ಎಂದರು.
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎಸ್.ವೆಂಕಟರಮಣ ಆಚಾರ್ಯ, ಮಾಧವ ಕಿಣಿ, ಬಿ.ರಾಘವೇಂದ್ರ ಪೈ, ಜಿ.ವೇದವ್ಯಾಸ ಆಚಾರ್ಯ, ಕೆ.ರಾಮನಾಥ ನಾಯಕ್, ಜಿ.ವೆಂಕಟೇಶ ನಾಯಕ್, ಗೀತಾ ನಾಯಕ್, ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಶಿವಲಿಂಗಪ್ಪ ಲ.ಗೋಟೂರ, ಪ್ರಧಾನ ವ್ಯವಸ್ಥಾಪಕ ಮಹೇಶ ರಂ.ಕುಲಕರ್ಣಿ, ನಿರ್ದೇಶಕರು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.