ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಮಾತಾ ಪಿತೃ ವಂದನಾ ಕಾರ್ಯಕ್ರಮ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಶುಕ್ರವಾರ ನಡೆಯಿತು.

ಶಿಶು ಮಂದಿರದ ಅಧ್ಯಕ್ಷೆ ಸವಿತಾ ಯು. ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳಿಗೆ ತಂದೆ ತಾಯಿಯ ಮೇಲೆ ಪ್ರೀತಿ, ವಿಶ್ವಾಸ, ಗೌರವ ಕಡಿಮೆಯಾಗುತ್ತಿದೆ. ಬಾಲ್ಯದಲ್ಲಿ ಅವರಿಗೆ ಸರಿಯಾದ ಶಿಕ್ಷಣ, ಸೂಕ್ತ ಮಾರ್ಗದರ್ಶನ ನೀಡುವುದು ಅವಶ್ಯಕ. ಹಿಂದಿನ ಕಾಲದಲ್ಲಿ ತಂದೆ ತಾಯಿಯನ್ನು ದೇವರಿಗೆ ಸಮ ಎನ್ನುತ್ತಿದ್ದರು. ಆದರೆ ಕಾಲ ಬದಲಾದಂತೆ ತಂದೆ ತಾಯಿಯರನ್ನು ನೋಡುವ ಶೈಲಿ ಕೂಡ ಬದಲಾಗುತ್ತಿದೆ. ಶಿಶು ಮಂದಿರದ ಶಿಕ್ಷಣದಲ್ಲಿ ಮಾತಾ ಪಿತೃ ವಂದನ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ತಂದೆ ತಾಯಿಯ ಬಗ್ಗೆ ಪೂಜ್ಯ ಭಾವನೆಯನ್ನು ಬೆಳೆಸಿ ತನ್ಮೂಲಕ ತಂದೆ ತಾಯಿಯನ್ನು ಗೌರವದಿಂದ ಕಾಣುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ, ಮಾತಾಜಿ ಭಾಗೀರಥಿ, ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯರು, ಪೋಷಕರು ಮೊದಲಾದವರು ಉಪಸ್ಥಿತರಿದ್ದರು.
ಸವಿತಾ ಯು.ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.










