ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಲ ಇದರ 36ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಇವುಗಳ 30ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರ ಹಂದಾಡಿ ಮಾತನಾಡಿ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣದ ಮೂಲಕ ಅಭಿವೃದ್ಧಿಯನ್ನು ಹೊಂದುವಂತಾಗಬೇಕು. ಅಂತಹ ಶಿಕ್ಷಣವನ್ನು ಪಡೆಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಬೇಕು ಎಂದು ಹೇಳಿದರು.
ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು ಶುಭ ಹಾರೈಸಿದರು. ಪರಿಯಾಳ ಸಮಾಜ ಸುಧಾರಕರ ಸಂಘ ಕುಂದಾಪುರದ ಅಧ್ಯಕ್ಷರಾದ ಮಂಜುನಾಥ ಸಾಲಿಯನ್ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ 2021- 22 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರಾಂಕ್ ಪಡೆದ ವಿದ್ಯಾರ್ಥಿನಿ ನೇಹಾ ಎಸ್ ಕೊಡೇರಿ, ಯುವ ಬರಹಗಾರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ, ಮುಳುಗು ತಜ್ಞ ದಿನೇಶ್ ಖಾರ್ವಿ ಹಾಗೂ ಸಮಾಜ ಸೇವಕ ಬೆಂಕಿಮಣಿ ಸಂತು ಇವರನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರಾದ ಮಹೇಶ್ ಜಿ ಮತ್ತು ಗೋಪಾಲ ಟಿ ಇವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಸಹನಾ ಕೆ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್. ಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವತಿ ಮಂಡಲದ ಕಾರ್ಯದರ್ಶಿ ಸರಸ್ವತಿ ವರದಿ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ, ನಾಗಲಕ್ಷ್ಮಿ ಬಹುಮಾನಿತರ ಪಟ್ಟಿ ಓದಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅನಿತಾ ವಂದಿಸಿದರು.















