ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.
ಈ ವೇಳೆ ಅವರು ಅಧಿಕಾರಿಗಳಿಂದ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಬಳಿಕ ಮಾತನಾಡಿ, ಕುಡಿಯುವ ನೀರು ಸಮಸ್ಯೆಯನ್ನು ಆದ್ಯತೆಯ ನೆಲೆಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್, ಟ್ಯಾಂಕ್ ನಿರ್ಮಾಣಕ್ಕೆ ಮೀಸಲು ಅರಣ್ಯದಿಂದ ತಾಂತ್ರಿಕ ಅಡಚಣೆಗಳು ಆಗುತ್ತಿದ್ದು ಇದನ್ನು ಪರಿಹರಿಸಿಕೊಳ್ಳಬೇಕು. ಡೀಮ್ಡ್ ಫಾರೆಸ್ಟ್ ಸಮಸ್ಯೆಯ ಗೊಂದಲಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಮಾಡುವ ಮೂಲಕ ಸಮಸ್ಯೆ ಪರಿಹಾರ ಮಾಡಬೇಕು. ಸಮಸ್ಯೆಗಳು ಎದುರಾದ ನನ್ನ ಗಮನಕ್ಕೆ ತನ್ನಿ ಪರಿಹಾರಕ್ಕೆ ಒಟ್ಟಾಗಿ ಪ್ರಯತ್ನಿಸೋಣ ಎಂದರು.
ಶಾಸಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್ ಅವರು, ಮಳೆಗಾಲದ ಮುನ್ನೆಚ್ಚರಿಕೆ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕರ ನೀಡಲಾಗಿದೆ. ತುರ್ತು ಸ್ಪಂದಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರಲ್ಲದೇ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಮೂನೆ 53ರ ಪ್ರಕಾರ 354, 94ಸಿಯಲ್ಲಿ 302, 94ಸಿಸಿಯಲ್ಲಿ 26 ಅರ್ಜಿಗಳು ಬಾಕಿ ಇದ್ದು, ಸರಕಾರದ ನಿರ್ದೇಶನ ಆಧರಿಸಿ ಕಡತ ವಿಲೇವಾರಿ ಮಾಡಲಾಗುವುದು ಎಂದರು.
ಎಲ್ಲಡೆಯೂ ಶಾಲೆಗಳು ಪುನರಾರಂಭವಾಗುತ್ತಿವೆ. ಕುಡಿಯಲು ನೀರು, ಬಿಸಿಯೂಟಕ್ಕೆ ನೀರಿನ ವ್ಯವಸ್ಥೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ಕುಂದಾಪುರ ಬೋರ್ಡ್ ಹೈಸ್ಕೂಲ್ ನಲ್ಲಿ ಸಾಕಷ್ಟು ಪ್ರಮಾಣದ ವಿದ್ಯಾರ್ಥಿಗಳು ಇರುವುದರಿಂದ ಪುರಸಭೆಯ ಮೂಲಕ ನೀರು ಸರಬರಾಜು ಮಾಡಲು ಮನವಿ ಸಲ್ಲಿಸಿದ್ದೇವೆ. ಮೊದಲ ಮಳೆ ನೀರು, ಬಾವಿಯಲ್ಲಿ ಹೊಸ ನೀರು ಇತ್ಯಾದಿ ಕಾರಣಗಳಿಂದ ಕುಡಿಯಲು ಮಕ್ಕಳು ಮನೆಯಿಂದ ನೀರು ತರುವಂತೆ ಸೂಚನೆ ನೀಡಲಾಗಿದೆ ಎಂದರು.
ಕಾಳಾವರ ಗ್ರಾಮದ ದೇವಸ್ಥಾನ ಬೆಟ್ಟು, ಗುಳ್ಳಾಡಿ ಭಾಗದಲ್ಲಿ ನೀರಿನ ಸಮಸ್ಯೆ ಇದೆ.100 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಮಡಾಮಕ್ಕಿಯಲ್ಲಿ 10 ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಪೈಪ್ಲೈನ್ ಮಾಡಲು ಜಾಗದ ಸಮಸ್ಯೆ ಉಂಟಾಗಿತ್ತು. ಈಗ ಅದನ್ನು ಸರಿಪಡಿಸಿಕೊಳ್ಳಲಾಗಿದೆ. ಚಕರ್ ಮಕ್ಕಿ ಎಂಬಲ್ಲಿ 30 ಮನೆಗಳಿಗೆ ನೀರಿನ ಸಮಸ್ಯೆ ಇದೆ. ಜೆಜೆಎಂನಲ್ಲಿ ಪೈಪ್ ಲೈನ್ ಆಗಿದ್ದರೂ ಕೂಡಾ ನೀರಿನ ಮೂಲದ ಸಮಸ್ಯೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು. ಹೆಂಗವಳ್ಳಿಯಲ್ಲಿ 75 ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ವಿದ್ಯುತ್ ಲೈನ್ ಅಳವಡಿಕೆಗೆ 28 ಲಕ್ಷ ಪಾವತಿಸಲಾಗಿದೆ. ವಿದ್ಯುತ್ ಕೇಬಲ್ ಮೂಲಕ ಸರಳೀಕೃತ ಮಾರ್ಗ ಅನುಸರಿಸಿದರೆ ಹಣ ಉಳಿಯುತ್ತದೆ. ಈಗಾಗಲೇ ಡೆಪಾಸಿಟ್ ಮಾಡಲಾದ ಹಣ ಮರಳಿ ಪಡೆಯುವುದು ಕಷ್ಟ ಎನ್ನಲಾಗುತ್ತಿದೆ ಎಂದು ಹೆಂಗವಳ್ಳಿ ಅಧಿಕಾರಿಯೋರ್ವರು ಸಭೆಯ ಗಮನಕ್ಕೆ ತಂದರು. ಈ ವಿಚಾರವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ಸರಿಪಡಿಸಿ ಕೊಡುವಂತೆ ಶಾಸಕರು ಸೂಚನೆ ನೀಡಿದರು. ಕೋಡಿ ಬೇಂಗ್ರೆ, ಯಡ್ತಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಅಲ್ಲಿನ ಅಧಿಕಾರಿಗಳ ಶಾಸಕರ ಮುಂದಿಟ್ಟರು.
ಕೊಲ್ಲೂರು ಹಾಲಾಡಿ ಮಾರ್ಗವಾಗಿ ಸರ್ಕಾರಿ ಬಸ್ ನಿಲ್ಲಿಸಿರುವ ಬಗ್ಗೆ ಉತ್ತರಿಸಿದ ಕೆಎಸ್ ಆರ್ ಟಿಸಿ ಅಧಿಕಾರಿಗಳು, ಮಾರಣಕಟ್ಟೆಯಿಂದ ಶಂಕರನಾರಾಯಣಕ್ಕೆ ಕ್ರೊಡಬೈಲೂರು ಮಾರ್ಗವಾಗಿ ಬಸ್ ಸಂಚರಿಸುತ್ತಿದೆ. ನೆಂಪುವಿನಿಂದ ಶಂಕರನಾರಾಯಣ ಬರುವ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗುತ್ತದೆ ಎಂದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಲ್ಲಿ 4150 ಹೇಕ್ಟೇರ್ ಪ್ರದೇಶದಲ್ಲಿ ಭತ್ತ ಬೇಸಾಯದ ಗುರಿಯಿದ್ದು 250 ಕ್ವಿಂಟಾಲ್ ಎಂ.ಒ4 ಬಿತ್ತನೆ ಬೀಜ ದಾಸ್ತಾನು ಇದೆ.ಸುಣ್ಣ ಕೂಡಾ ದಾಸ್ತಾನು ಇದೆ. ಎಂದು ರೂಪಾ ಮಾಡ ತಿಳಿಸಿದರು.
ಕುಂದಾಪುರ ತಾಲೂಕು ಕಛೇರಿ ಹಾಗೂ ಪಶುಸಂಗೋಪನಾ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸುವುದು ಹೊರೆಯಾಗುತ್ತಿದೆ. ಈ ಬಗ್ಗೆ ಕ್ರಮವಹಿಸುವಂತೆ ತಹಶೀಲ್ದಾರರು ಶಾಸಕರನ್ನು ಕೇಳಿಕೊಂಡರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಸತೀಶ್, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್, ಕುಂದಾಪುರ ಇಓ ಯತೀಶ ಕುಂದಾಪುರ, ಹೆಬ್ರಿ ಇಓ ಇಬ್ರಾಹಿಂ, ಬ್ರಹ್ಮಾವರ ಇಓ ಶಶಿಧರ್ ಉಪಸ್ಥಿತರಿದ್ದರು.