ವಿಪರೀತ ತಲೆನೋವು ಅನುಭವಿಸಿ ಸುಸ್ತಾಗಿ ನಗರದ ದೊಡ್ಡ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರ ಸಲಹೆಯಂತೆ ನೇಸಲ್ ಎಂಡೋಸ್ಕೋಪಿ ಮಾಡಿಸಿಕೊಂಡು ರಿಪೋರ್ಟ್ ಗೆ ಕಾಯುತ್ತಾ ಕುಳಿತೆ.ನನ್ನ ಪಕ್ಕದಲ್ಲಿದ್ದ ಖಾಲಿ ಕುರ್ಚಿಯಲ್ಲಿ ಒಬ್ಬ ಗಂಡಸು ಬಂದು ಮುದುರಿಕೊಂಡು ಕುಳಿತರು. ಮಾಸ್ಕ್ ಹಾಕಿದ್ದರು. ಒಮ್ಮೆ ಅವರತ್ತ ನೋಡಿದೆ. ಗಂಟಲಲ್ಲಿ ದೊಡ್ಡ ಗಾತ್ರದ ಗಾಯ. ಅಯ್ಯೋ ಪಾಪ ಏನಾಗಿದೆಯೋ ಎನಿಸಿತು. ಮತ್ತೆ ಅವರು ನೋಡಲೇ ಇಲ್ಲ. ನಾನು ಪದೇ ಪದೇ ಅವರನ್ನೇ ನೋಡಡಿದರೆ ಅವರ ಮನಸ್ಸಿಗೆ ನೋವಾಗಬಹುದೆಂದು ಭಾವಿಸಿ ಸುಮ್ಮನೆ ಕಣ್ಣು ಮುಚ್ಚಿ ಕುಳಿತೆ. ಸ್ವಲ್ಪ ಹೊತ್ತಿನಲ್ಲೆ ಆ ಗಂಡಸನ್ನು ವೈದ್ಯರ ಕೋಣೆಗೆ ಕರೆದರು. ಅವರಿಗೆ ಏನಾಗಿರಬಹುದೆಂಬ ಕುತೂಹಲ. ಅದಕ್ಕೆ ಸರಿಯಾಗಿ ವೈದ್ಯರ ಕೋಣೆ ಸಹ ನಾನು ಕುಳಿತ ಜಾಗದ ಎದುರಿಗಿತ್ತು.ಬನ್ನಿ ಹೇಗಿದ್ದೀರಾ ಎಂದು ಪ್ರೀತಿಯಿಂದ ವೈದ್ಯರು ವಿಚಾರಿಸಿದರು. ಆ ಪ್ರೀತಿಗೆ ತಾನು ಅರ್ಹನಲ್ಲವೆಂಬಂತೆ ಆ ವ್ಯಕ್ತಿ ಮಾಸ್ಕ್ ತೆಗೆದು ಚಿಕ್ಕ ನಗು ಬೀರಿದರು. ಕೈಯಲ್ಲಿದ್ದ ಚೀಲದಿಂದ ರಿಪೋರ್ಟ್ ತೆಗೆದು ವೈದ್ಯರ ಕೈಗಿತ್ತರು. ಡಿಪಾರ್ಟೆಂಟ್ ಆಫ್ ಓಂಕಾಲಜಿ ಎಂದು ಬರೆದಿದ್ದ ಮುಖಪುಟವನ್ನು ಕಂಡ ನನಗೆ ಎದೆ ಜಲ್ಲೆಂದೆತು. ರಿಪೋರ್ಟ್ ಬಳಿಕ ಗಾಯ ನೋಡಿದ ವೈದ್ಯರು ಈಗಲೂ ಬೀಡಿ ಸಿಗರೇಟು ಸೇದುತ್ತೀರಾ ಎಂದು ಕೇಳಿದರು. ಆತ ತಲೆ ತಗ್ಗಿಸಿ ಇಲ್ಲ ಅಂದರು. ಗಾಯವನ್ನು ಇನ್ನು ಪರೀಕ್ಷಿಸುತ್ತಿದ್ದ ಪಕ್ಕದಲ್ಲಿ ನಿಂತಿದ್ದ ಇನ್ನೋರ್ವ ವೈದ್ಯರ ಬಳಿ ಕಷ್ಟ ಎಂಬಂತೆ ಸನ್ನೆ ಮಾಡಿದರು.
ಎಷ್ಟೋ ವರ್ಷಗಳಿಂದ ಮಾಡಿದ ತಪ್ಪು ಇಂದು ಆತನನ್ನು ತಲೆ ತಗ್ಗಿಸುವಂತೆ ಮಾಡಿದ್ದಲ್ಲದೆ, ಸಾವು ಬದುಕಿನ ಹೋರಾಟಕ್ಕಿಳಿಸಿದೆ. ಕಣ್ಣಂಚಲ್ಲಿ ತುಂಬಿ ನಿಂತ ನೀರು ಸ್ಪಷ್ಟವಾಗಿ ಹೇಳುತ್ತಿತ್ತು ಅವರಿಗೆ ತನ್ನ ತಪ್ಪಿನ ಅರಿವಾಗಿದೆ ಎಂದು, ಆದರೆ ಅದನ್ನು ತಿದ್ದಿಕೊಳ್ಳುವ ಮಾರ್ಗ ಮುಚ್ಚಿ ಹೋಗಿದೆ. ಇದೇ ಭಾವನೆ ಈ ಚಟಗಳಿಗೆ ದಾಸನಾಗುವ ಮೊದಲೆ ಇದ್ದಿದ್ದರೆ…
ಯಾವುದೇ ಆಗಲಿ ಪರಿಸ್ಥಿತಿ ಕೈ ಜಾರಿದ ಮೇಲೆ ಸರಿಮಾಡಲಾಗದು. ಒಂದು ಸಣ್ಣ ಅಜಾಗರೂಕತೆ ಅವರೊಂದಿಗೆ ಸಂಸಾರದ ಸಂತೋಷನ್ನು ಸುಟ್ಟಿದೆ. ಅವರನ್ನೇ ಅವಲಂಬಿಸಿರುವ ಹೆಂಡತಿ, ತಂದೆಯನ್ನು ನಂಬಿದ ಮದುವೆಯ ವಯಸ್ಸಿನ ಮಗಳು ಇದ್ದಿರಬಹುದು. ಡಾಕ್ಟರೋ ಇಂಜಿನೀಯರೋ ಆಗಬೇಕೆಂದು ಕನಸು ಕಾಣುತ್ತ ಕಾಲೇಜಿಗೆ ಹೋಗುತ್ತಿರುವ ಮಗನು ಇದ್ದಿರಬಹುದು. ವೃದ್ಧಾಪ್ಯದಲ್ಲಿ ಮಗ ತಮಗೆ ಆಧಾರವಾಗತ್ತಾನೆಂದು ಸಾಕಿ ಸಲುಹಿದ ತಂದೆ ತಾಯಿ ಇದ್ದರೆ ಅವರ ಪಾಡು? ಜೊತೆಗೆ ದೂಮಪಾನದ ಹೊಗೆಯನ್ನು ಜೊತೆಗಿದ್ದವರು ಸೇವಿಸುವುದರಿಂದ ಆಗಬಹುದಾದ ತೊಂದರೆ ಬೇರೆ. ಒಬ್ಬರ ತಪ್ಪಿಗೆ ಅದೆಷ್ಟು ಜನರಿಗೆ ಶಿಕ್ಷೆ.
ಧೂಮಪಾನಕ್ಕೆ ಬೆಲೆ ತೆರಬೇಕಾದಿತು ಎಂದು ಎಲ್ಲೆಡೆ ಕಾಣುವ ಸಂದೇಶ ಅದೆಷ್ಟು ಸತ್ಯ ಅಲ್ಲ?
- ನಮತಾ