ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ವಿಶ್ವಕರ್ಮ ಜಯಂತೋತ್ಸವ ಯೋಜನೆಗೆ ಸೆ. 17ರಂದು ಅವರಿಂದ ಚಾಲನೆ ದೊರೆಯಲಿದ್ದು, ಅದೇ ಸಮಯಕ್ಕೆ ದೇಶದಾದ್ಯಂತ ಸುಮಾರು 70 ಪ್ರಮುಖ ಸ್ಥಳದಲ್ಲಿ, ಕೇಂದ್ರದ 70 ಸಚಿವರು ಚಾಲನೆ ನೀಡಲಿದ್ದಾರೆ. ಇದು ಸಮಸ್ತ ವಿಶ್ವಕರ್ಮ ಸಮುದಾಯದವರಿಗೆ ನೀಡಿದ ಗೌರವ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಅಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ಧೇಶಿಸಿ ಮಾತನಾಡಿ ವಿಶ್ವಕರ್ಮ ಜಯಂತೋತ್ಸವವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದಿನಲ್ಲಿ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಮಾನ್ಯ ನಿತಿನ್ ಗಡ್ಕರಿಯವರು ನಾಗಪುರದಲ್ಲಿ. ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ತಿರುವನಂತಪುರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯಾದ್ಯಂತ ವಿಶ್ವಕರ್ಮ ಜಯಂತೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲೆ, ತಾಲೂಕು ಹಾಗೂ ಗ್ರಾಮದಲ್ಲಿ ಕೂಡ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಸಮಸ್ತ ವಿಶ್ವಕರ್ಮ ಬಂಧುಗಳ ಜಗದೊಡೆಯ ಶ್ರೀ ವಿಶ್ವಕರ್ಮ ದೇವರ ಫೋಟೋವನ್ನು ಇರಿಸಿ ಪುಷ್ಪಾರ್ಚನೆಗೈದು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಬಂಧುಗಳು ಪಾಲ್ಗೊಂಡು, ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಇದರ ಗೌರವಾಧ್ಯಕ್ಷ ಉದ್ದಾಲಗುಡ್ಡೆ ಗಂಗಾಧರ ಆಚಾರ್ಯ, ಬೈಂದೂರು ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಬೈಂದೂರು, ರಮೇಶ್ ಆಚಾರ್ಯ ಬಂಡಿಮಠ ಬಾರಕೂರು, ನಾಗಪ್ಪಯ್ಯ ಆಚಾರ್ಯ ನಡೂರು ಉಪಸ್ಥಿತರಿದ್ದರು.