ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ ಅಂಗವಾಗಿ ಶೆಫಿನ್ಸ್ ಸಂಸ್ಥೆಯಿಂದ ಅತಿಥಿ ಹಾಗೂ ಗೌರವ ಶಿಕ್ಷಕರ ತರಬೇತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೆಡಾಡಿ-ಮತ್ಯಾಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ತರಬೇತಿಗೆ ಕುಂದಾಪುರ ತಾಲೂಕಿನ 8 ಶಾಲೆಯ 20 ಶಿಕ್ಷಕರು ಭಾಗವಹಿಸಿದ್ದು, ಅವರ ನಡುವೆ ಶೆಫಿನ್ಸ್ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಗಾಗಿ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ಎಲ್ಲಾ ಅತಿಥಿ/ ಗೌರವ ಶಿಕ್ಷಕರೂ ತಾವು ಪಾಠ ಮಾಡುವ ವಿಷಯದಲ್ಲಿ ಬಹಳ ಅದ್ಭುತವಾಗಿ ಬಹಳಷ್ಟು ಟೀಚಿಂಗ್ ಎಯ್ಡ್ ಜೊತೆಗೆ ಭಾಗವಹಿಸಿ, ತಮ್ಮ ಅಧ್ಯಾಪನದಲ್ಲಿನ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದರು. ಮೂರು ಸುತ್ತಿನ ಈ ಸ್ಪರ್ದೆಯ ಅಂತಿಮ ಸುತ್ತಿನಲ್ಲಿ ಬಿದ್ಕಲ್ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಾಗರತ್ನ ಹಾಗೂ ಜಪ್ತಿ ರಾಮಚಂದ್ರ ಅನುದಾನಿತ ಶಾಲೆಯ ಉದಯ್ ಕೊಠಾರಿ ಮತ್ತು ವಿಜಯ್ ಕಣದಲ್ಲಿದ್ದರು.
ಕೊನೆಯ ಸುತ್ತಿನಲ್ಲಿ ರಾಮಚಂದ್ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜಪ್ತಿಯ ಗೌರವ ಶಿಕ್ಷಕರಾದ ಉದಯ ಕೊಠಾರಿ ಉಳಿದೆಲ್ಲ ಶಿಕ್ಷಕರ ಮೆಚ್ಚುಗೆ ಪಡೆದು, ಶೆಫಿನ್ಸ್ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಗೆ ಭಾಜನರಾದರು. ಅವರು ಜಪ್ತಿಯ ಶಾಲೆಯಲ್ಲಿ ಶಿಕ್ಷಕರಾಗಿ 10 ವರ್ಷ ಸೇವೆ ಸಲ್ಲಿಸಿದ್ದು ಮೊಟ್ಟ ಮೊದಲ ಬಾರಿಗೆ ಪಡೆದ ಪ್ರಶಸ್ತಿ ಇದು ಎಂದು ಸಂತಸ ವ್ಯಕ್ತಪಡಿಸಿರುತ್ತಾರೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕುಂದಾಪುರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಕನ್ಯಾ, ಅತಿಥೇಯ ಯಡಾಡಿ ಮತ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಣಿ, ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಮೊಗವೀರ, ಶೆಫಿನ್ಸ್ ನಿರ್ದೇಶಕ ಮನೋಜ್ ಕಡಬ, ತರಬೇತುದಾರೆ ಸ್ಮಿತಾ ಕೆ. ಸಿ., ಸಂಯೋಜಕಿ ಅರ್ಪಿತಾ ಬ್ರಹ್ಮಾವರ, ಇಜಾಜ್ ಮನ್ನ ಮತ್ತು ಇತರ ಅತಿಥಿ/ ಗೌರವ ಶಿಕ್ಷಕರು ಉಪಸ್ಥಿತರಿದ್ದರು.
ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ಉಡುಪಿಯು ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಹಮ್ಮಿಕೊಳ್ಳುತ್ತಿದ್ದು, ಈ ವರೆಗೆ ಒಟ್ಟು 3 ಬ್ಯಾಚ್ ತರಬೇತಿಗಳು ಸಂಪನ್ನಗೊಂಡಿವೆ. ಪ್ರತೀ ಬ್ಯಾಚಿನಲ್ಲಿಯೂ ಒಬ್ಬರು ಅತಿಥಿ/ ಗೌರವ ಶಿಕ್ಷಕರಿಗೆ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಯನ್ನು ನೀಡುವ ಪರಿಪಾಠವನ್ನು ಹೊಂದಿದ್ದು, ಮೊದಲ ಬ್ಯಾಚಿನಲ್ಲಿ ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಶಾಲೆಯ ಗೌರವ ಶಿಕ್ಷಕಿ ಶ್ರೀಮತಿ ಪ್ರಿನ್ಸಿ ಬ್ರಿಟ್ಟೋ ಈ ಪ್ರಶಸ್ತಿಯನ್ನು ಪಡೆದಿದ್ದರೆ, ಎರಡನೇ ಬ್ಯಾಚಿನಲ್ಲಿ ಉಡುಪಿ ತಾಲೂಕು ಮಂಚಿ ಸರಕಾರಿ ಪ್ರೌಢ ಶಾಲೆಯ ಅತಿಥಿ ಶಿಕ್ಷಕ ಶ್ರೀ ಗೌರೀಶ್ ಗೌಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.