ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ಯಾನ್ಸರ್ ಕಾಯಿಲೆಯ ಬಗ್ಗೆ ಆರಂಭ ಹಂತದಲ್ಲಿ ಭಯ ಮತ್ತು ಉಪೇಕ್ಷೆ ತಾಳದೆ, ಪರಿಣತರಿಂದ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡದರೆ ಅದು ವಾಸಿಯಾಗುತ್ತದೆ ಎಂದು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ತಜ್ಞ ವೈದ್ಯ ಡಾ. ಹೇಮಂತಕುಮಾರ್ ಹೇಳಿದರು.
ಮರವಂತೆಯ ಸಾಧನಾ ವೇದಿಕೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಆಸರೆ ಚಾರಿಟಬಲ್ ಟ್ರಸ್ಟ್, ಸ್ನೇಹಾ ಮಹಿಳಾ ಮಂಡಳ, ಹೋಲಿ ಫ್ಯಾಮಿಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಚೇತನಾ ಚಿಕಿತ್ಸಾಲಯದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಅಲ್ಲಿನ ಸಾಧನಾ ಸಮುದಾಯ ಭವನದಲ್ಲಿ ನಡೆದ ಕ್ಯಾನ್ಸರ್ ಕಾಯಿಲೆ ಅರಿವು ಕಾರ್ಯಕ್ರಮದಲ್ಲಿ ಅವರು ಕಾಯಿಲೆ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಶರೀರದ ವಿವಿಧ ಅಂಗಗಳಿಗೆ ತಗಲುವ ಕ್ಯಾನ್ಸರ್ ಕಾಯಿಲೆ, ಆರಂಭದಲ್ಲೇ ಅದನ್ನು ಪತ್ತೆ ಮಾಡುವ ಕ್ರಮ, ಅದರ ಹಂತಗಳಲ್ಲಿ ಲಭ್ಯವಿರುವ ಚಿಕಿತ್ಸಾ ಕ್ರಮ, ಆರೈಕೆ ಕುರಿತು ದೃಕ್ ಸಾಧನ ಬಳಸಿ ವಿವರ ನೀಡಿದ ಡಾ. ಹೇಮಂತಕುಮಾರ್, ಈ ಕಾಯಿಲೆಯನ್ನು ದೂರವಿಡಲು ಸೇವಿಸಬೇಕಾದ ಮತ್ತು ವರ್ಜಿಸಬೇಕಾದ ಆಹಾರ, ಅನುಸರಿಸಬೇಕಾದ ಜೀವನ ಶೈಲಿ, ಕ್ಯಾನ್ಸರ್ ಕಾರಕ ದುಶ್ಚಟಗಳ ದುಷ್ಪರಿಣಾಮಗಳನ್ನು ಸರಳ ಭಾಷೆಯಲ್ಲಿ ಎಳೆಎಳೆಯಾಗಿ ವಿವರಿಸಿದರು. ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರಿಗೆ ಅವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ತನ ಮತ್ತು ಗರ್ಭಕೋಶ ಕಂಠದ ಕ್ಯಾನ್ಸರ್ ಬಗ್ಗೆ ವಹಿಸಬೇಕಾದ ಎಚ್ಚರದ ಮಾಹಿತಿ ನೀಡಿದರು. ಸಭಿಕರಾದ ಉದಯಶಂಕರ ಭಟ್, ಮಂಜುನಾಥ ಮಧ್ಯಸ್ಥ, ಅನಿತಾ ಆರ್. ಕೆ, ಮಾನಸ ಅವಭೃತ, ದಯಾನಂದ ಬಳೆಗಾರ್, ಉಷಾ ಆಲ್ಮೇಡ, ಸೀತಾ ಜೋಗಿ, ಶ್ರೀಮತಿ ಆಚಾರ್ಯ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಮರವಂತೆ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ. ಕೆ. ಗಣೇಶ ಭಟ್ಟ ಕಾರ್ಯಕ್ರಮದ ಪ್ರಸ್ತುತತೆ ಕುರಿತು ಮಾತನಾಡಿದರು. ಸಾಧನಾ ಅಧ್ಯಕ್ಷ ಜೇಕ್ಸನ್ ಡಿಸೋಜ ಇದ್ದರು.
ಚೇತನ ಚಿಕಿತ್ಸಾಲಯದ ಡಾ. ರೂಪಶ್ರೀ ಸ್ವಾಗತಿಸಿದರು. ಸಾಧನಾ ಸದಸ್ಯ ಜಿ. ಸೀತಾರಾಮ ಮಡಿವಾಳ ವಂದಿಸಿದರು. ದೇವಿದಾಸ ಶ್ಯಾನುಭಾಗ್ ನಿರೂಪಿಸಿದರು.