ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರಕಾರಿ ಕಾಲೇಜುಗಳಲ್ಲಿ ಕಲಿಯುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಿದ್ದ ಬಹುದೊಡ್ಡ ಕೊರತೆಯನ್ನು ನೀಗಿಸುವಲ್ಲಿ ಸಮೃದ್ಧ ಬೈಂದೂರು ತಂಡ ಪ್ರಥಮ ಹೆಜ್ಜೆ ಇರಿಸಿದ್ದು, ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿ ನೀಡಲು ಯೋಜಿಸಿದೆ. ಗುಣಮಟ್ಟದ ತರಬೇತಿ ನೀಡುವ ಮೂಲಕ ಅವಕಾಶವನ್ನು ಸೃಷ್ಟಿಸಿಕೊಡುವ ಜವಾಬ್ದಾರಿ ನಮ್ಮದಾಗಿದ್ದು, ಆಸಕ್ತಿಯ ಕಲಿಕೆ ಹಾಗೂ ಫಲಿತಾಂಶವನ್ನು ತೋರಿಸುವ ಹೊಣೆ ವಿದ್ಯಾರ್ಥಿಗಳದ್ದಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ಬೈಂದೂರು ಹಾಗೂ ಉಪ್ಪುಂದ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ, ಜ್ಞಾನದೀಪ ಟುಟೋರಿಯಲ್ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡ ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಬಡತನವೆಂಬುದು ಕೊರತೆಯಾಗಬಾರದು. ಅದನ್ನೇ ಸವಾಲಾಗಿ ಸ್ವೀಕರಿಸಿದ ಅದೇಷ್ಟೋ ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆದ್ದ ನೂರಾರು ಉದಾಹರಣೆಗಳು ನಮ್ಮ ಮುಂದಿದೆ. ಅಂತಹದ್ದೊಂದು ಇಚ್ಚಾಶಕ್ತಿಯನ್ನು ಬೆಳಿಸಿಕೊಳ್ಳಿ ಎಂದರು.
ತರಗತಿಗಳಲ್ಲಿ ಕಲಿಕೆಯಲ್ಲಿ ಉತ್ತಮ ಹಾಗೂ ಸಾಧಾರಣವಿರುವ ವಿದ್ಯಾರ್ಥಿಗಳಿಗೂ ಪಾಠ ಮಾಡಬೇಕಾಗುತ್ತದೆ. ಬಾಹ್ಯ ತರಬೇತಿಗಳಲ್ಲಿ ಕಲಿಕೆಯಲ್ಲಿ ಉತ್ತಮವಿರುವ ವಿದ್ಯಾರ್ಥಿಗಲೇ ಬಹುಪಾಲು ಕೆಸಿಇಟಿ ಹಾಗೂ ನೀಟ್ ತರಬೇತಿ ಪಡೆಯುವುದರಿಂದ ಅವರ ಬುದ್ಧಿಯಕ್ತಿ ಆಧಾರಿಸಿ ತರಗತಿಗಳನ್ನು ನಡೆಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ವಿದ್ಯಾರ್ಥಿಗಳು ತರಗತಿಯಲ್ಲಿ ಉಪನ್ಯಾಸದೊಂದಿಗೆ ಹೊಲಿಕೆ ಮಾಡುವುದನ್ನು ಬಿಡಿ. ಇದರಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉಪನ್ಯಾಸಕರ ಮನೋಭಾವವನ್ನು ಮತ್ತಷ್ಟು ಹೆಚ್ಚಲಿದೆ. ಬೈಂದೂರಿನಲ್ಲಿ ನಡೆಯಲಿರುವ ಉಚಿತ ತರಬೇತಿಯಲ್ಲಿ ಸರಕಾರಿ ಕಾಲೇಜಿನ ಉಪನ್ಯಾಸಕರೂ ವಿಶೇಷ ತರಗತಿಗಳನ್ನು ನಡೆಸಲಿದ್ದಾರೆ ಎಂದರು.
ಸುಮುಖ ಗ್ರೂಪ್ ಆಫ್ ಇಂಡಸ್ಟ್ರೀಸ್ನ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ದಿನಗಳಲ್ಲಿ ಕಷ್ಟಪಟ್ಟು ಕಲಿಕೆಯಲ್ಲಿ ತೊಡಗಿಕೊಂಡರೆ ಜೀವನಪೂರ್ತಿ ನೆಮ್ಮದಿಯ ದಿನಗಳನ್ನು ಕಾಣಲು ಸಾಧ್ಯವಿದೆ. ಸಮೃದ್ಧ ಬೈಂದೂರು ಪರಿಕಲ್ಪನೆಯಲ್ಲಿ ಹಮ್ಮಿಕೊಳ್ಳಲಾಗಿರುವ ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿಯಲ್ಲಿ ನುರಿತ ಉಪನ್ಯಾಸಕರು ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕಿದೆ. ವಿದ್ಯೆ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗುರುತರ ಬದಲಾವಣೆಯನ್ನು ತರಬೇಕೆಂಬ ಶಾಸಕರ ಕನಸನ್ನು ನನಸಾಗಿಸಲು ಬೈಂದೂರು ಕ್ಷೇತ್ರದ ನಾಗಕರಿಕರು ಜೊತೆಯಾಗಿ ನಿಲ್ಲಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪಿಯು ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಮಾಲಿನಿ ಕೆ.ಎಂ., ಬೈಂದೂರು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಪಿ. ನಾಯಕ್, ಉಪ್ಪುಂದ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ರವಿ ನಾಯಕ ಉಪಸ್ಥಿತರಿದ್ದರು.
ಬೈಂದೂರು ಜ್ಞಾನದೀಪ ಟುಟೋರಿಯಲ್ ಕಾಲೇಜಿನ ಸಂಯೋಜಕರಾದ ಗುರುರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಯೋಜಕರಾದ ಸತೀಶ್ ಎಂ ಸ್ವಾಗತಿಸಿ, ಸೌಮ್ಯ ಗುರುರಾಜ್ ಹಾಗೂ ಅಕ್ಷತಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.