ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡಾಡಿ ಗೋವುಗಳ ಕಳ್ಳತನ ಮಾಡಿದವರ ಮತ್ತು ಅಕ್ರಮ ಕಸಾಯಿಖಾನೆ ನಿರ್ಮಿಸಿಕೊಂಡು ಸಾಮೂಹಿಕವಾಗಿ ಗೋವುಗಳನ್ನು ಹತ್ಯೆ ಮಾಡಿದವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ವಾಸುದೇವ ದೇವಾಡಿಗ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರತ್ನಾಕರ ಗಾಣಿಗ, ತಾಲೂಕು ಕಾರ್ಯಕಾರಿಣಿ ಸದಸ್ಯ ಯಶವಂತ ಗಂಗೊಳ್ಳಿ ಹಾಗೂ ಜಿಲ್ಲಾ ಸಹ ಸಂಚಾಲಕ ನವೀನ್ ಗಂಗೊಳ್ಳಿ ನೇತೃತ್ವದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ನಿಯೋಗ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿತು.
ಗಂಗೊಳ್ಳಿಯಲ್ಲಿ ಪದೇ ಪದೇ ಗೋ ಕಳ್ಳತನ ಹಾಗೂ ಗೋ ಹತ್ಯೆಗಳು ನಿರಂತರವಾಗಿ ಎಗ್ಗಿಲ್ಲದೆ ಸಾಗುತ್ತಿದ್ದು, ಇದನ್ನು ತಡೆಗಟ್ಟುವಂತೆ ಹಿಂದು ಜಾಗರಣ ವೇದಿಕೆ ನಿರಂತರವಾಗಿ ಆಗ್ರಹಿಸುತ್ತಿದೆ. ಆದರೆ ಇಲಾಖೆ ವತಿಯಿಂದ ಗೋ ಹತ್ಯೆಯನ್ನು ತಡೆಯಲು ಸಾಧ್ಯವಾಗಿಲ್ಲ. ಗಂಗೊಳ್ಳಿಯಲ್ಲಿ ಪ್ರತಿ ಶುಕ್ರವಾರ ಗೋ ಹತ್ಯೆಯು ತೆರೆಮರೆಯಲ್ಲಿ ಇಸ್ಲಾಂ ಬಾಹುಳ್ಯ ಇರುವ ಪ್ರದೇಶಗಳಲ್ಲಿ ಹವ್ಯಾತವಾಗಿ ನಡೆಯುತ್ತಿದೆ. ಇದರಿಂದ ಗಂಗೊಳ್ಳಿಯಲ್ಲಿ ಪದೆ ಪದೇ ಹಿಂದು ಸಮಾಜದ ಮೇಲೆ ಅನ್ಯಾಯವಾಗುತ್ತಿದ್ದು, ಹಿಂದುಗಳ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು ಹಿಂದುಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ. ಗಂಗೊಳ್ಳಿಯಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿದೆ ಎಂಬುದಕ್ಕೆ ಕಳೆದ ಕೆಲವು ದಿನಗಳ ಹಿಂದೆ ನದಿ ತೀರದಲ್ಲಿ ಸಿಕ್ಕಿರುವ ಜಾನುವಾರು ಕಳೆಬರ ನಿದರ್ಶನವಾಗಿದೆ.
ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡಾಡಿ ಗೋವುಗಳ ಕಳ್ಳತನ ನಿರಂತರವಾಗಿ ಸಾಗುತ್ತಿದೆ. ಅ.೧೦ರಂದು ರಾತ್ರಿ ಸಮಯ ನಾಯಕವಾಡಿ ಮತ್ತು ತ್ರಾಸಿಯಲ್ಲಿ ಗೋ ಕಳ್ಳತನಕ್ಕೆ ಯತ್ನ ನಡೆದಿದ್ದು, ಈ ಬಗ್ಗೆ ಮಾಹಿತಿಯನ್ನು ಗಂಗೊಳ್ಳಿ ಠಾಣೆಗೆ ನೀಡಲಾಗಿದೆ. ಅತಿ ಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ನಡೆಯುತ್ತಿರುವ ಕಾನೂನುಬಾಹಿರ ವಿಕೃತ ಪ್ರಕರಣಗಳು ಹಿಂದುಗಳ ಭಾವನೆಗಳನ್ನು ಕೆರಳಿಸುವಂತೆ ಮಾಡಿದೆ. ಆದ್ದರಿಂದ ಅಕ್ರಮ ಗೋ ಹತ್ಯೆ ಮತ್ತು ಗೋ ಸಾಗಾಟ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಂಡು ಗಡಿಪಾಡು ಮಾಡಬೇಕೆಂದು ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಒತ್ತಾಯಿಸಿದೆ.
ಈ ಬಗ್ಗೆ ವಿಳಂಬವಾದಲ್ಲಿ ಗಂಗೊಳ್ಳಿಯ ಸಮಸ್ತ ಹಿಂದು ಸಮಾಜದ ಜೊತೆ ಸೇರಿ ಅಪರಾಧಿಗಳಿಗೆ ಶಿಕ್ಷೆ ಆಗುವ ತನಕ ನಿರಂತರ ಹೋರಾಟ ಮಾಡಲು ಹಿಂದು ಜಾಗರಣ ವೇದಿಕೆ ಸಿದ್ಧವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಿಂದು ಜಾಗರಣ ವೇದಿಕೆಯ ಕಾರ್ತಿಕ್ ಖಾರ್ವಿ, ಅಕ್ಷಯ್ ಖಾರ್ವಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.