ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಾಂಪತ್ಯ ಜೀವನದ ಬೆಳ್ಳಿಹಬ್ಬವನ್ನು ಪತ್ನಿಯ ನಿಧನಪೂರ್ವ ಬಯಕೆಯಂತೆ ನಡೆಸಿ, ಮಾದರಿ ಪತಿ ಪಟ್ಟಿಗೆ ಸೇರಿದ್ದಾರೆ. ದಾಂಪತ್ಯ ಜೀವನದ 25ರ ಸಂಭ್ರಮ ಪತ್ನಿ ಛಾಯಾಪ್ರತಿಕೃತಿ ಜೊತೆ ಆಚರಿಸಿಕೊಂಡ ಚಿತ್ರ ಸೋಸಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕುಂದಾಪುರ ಸಪ್ತಗಿರಿ ಕೋಆಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಎಂಬುವವರು ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದರು. ವಿವಾಹ ಮಹೋತ್ಸವ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸುಮಾ ಅವರ ಕನಸಾಗಿತ್ತು. ಆದರೆ ಅವರು ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು.
ಬಡಾಕೆರೆ ಶ್ರೀ ಲಕ್ಷ್ಮೀಜನಾರ್ದನ ಸಭಾಂಗಣ ಮಂಟಪದಲ್ಲಿ ಪತ್ನಿಯಷ್ಟೇ ಎತ್ತರದ ಛಾಯಾಪ್ರತಿಕೃತಿ ನಿರ್ಮಿಸಿ ಪತ್ನಿಯ ಬಯಕೆ ಈಡೇರಿಸಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಪತಿ ಹಾಗೂ ಹೆಣ್ಣು ಮಕ್ಕಳ ನಡುವೆ ನಿಲ್ಲಿಸಿದ ಸುಮಾ ಛಾಯಾಪ್ರತಿಕೃತಿ ಎನ್ನುವುದು ಗೊತ್ತಾಗದಷ್ಟು ನೈಜವಾಗಿದ್ದರೆ, ಭಾಗವಹಿಸಿದವರ ಹಾರೈಸಿದವರ ನಗುವಿನೊಂದಿಗೆ ಕಣ್ಣೀರು ಮಿಳಿತಗೊಂಡಿತ್ತು.










