ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೀವೆಷ್ಟೇ ಆರ್ಥಿಕ ಶ್ರೀಮಂತಿಕೆಯಿದ್ದರೂ ಆರೋಗ್ಯ ಶ್ರೀಮಂತಿಕೆಯಿಲ್ಲದಿದ್ದರೆ ನೆಮ್ಮದಿಯ ಜೀವನ ಸಾಗಿಸಲಾಗದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಹೇಳಿದರು.
ಅವರು ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಸಹಯೋಗದಲ್ಲಿ ಭಾನುವಾರ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವಂತ ದೇಹ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ಕನಿಷ್ಟ ವರ್ಷಕ್ಕೊಂದು ಬಾರಿಯಾದರೂ ರಕ್ತದಾನ ಮಾಡುವ ಶಪಥ ಮಾಡಬೇಕು. ಅದು ಮಾತ್ರ ರಕ್ತದ ಕೊರತೆಯಿಂದ ಬಳಲುತ್ತಿರುವ ಅದೆಷ್ಟೋ ರೋಗಿಗಳ ಬದುಕಿಗೆ ನಾವು ಕೊಡುವ ಅಮೂಲ್ಯ ದೇಣಿಗೆಯಾಗಬಹುದು ಎಂದವರು ಹೇಳಿದರು.
ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಚಂದ್ರಶೇಖರ್ ಮಾತನಾಡಿ, ನಿಯಮಿತ ಆಹಾರ, ಆಗಿದ್ದಾಂಗೆ ಆರೋಗ್ಯ ತಪಾಸಣೆಯಿಂದ ಆರೋಗ್ಯ ರಕ್ಷಣೆ ಸಾಧ್ಯ. ಉತ್ತಮ ಆರೋಗ್ಯ ವಿಮೆಯಿಂದ ಮಾಡಿಸಿಕೊಳ್ಳುವುದೇ ದುಬಾರಿ ಚಿಕಿತ್ಸಾ ವೆಚ್ಚದಿಂದ ಪಾರಾಗುವ ಸದ್ಯದ ದಾರಿಯಾಗಿದೆ ಎಂದರು.
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು ಸಹಕಾರಿ ಸೇವೆಯ ಜೊತೆಗೆ ತನ್ನ ಸದಸ್ಯರು ಹಾಗೂ ಸಂಘದ ವ್ಯಾಪ್ತಿಯ ಸಾರ್ವಜನಿಕರ ಉಪಯೋಗಕ್ಕಾಗಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ. ಆರೋಗ್ಯ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಅದಕ್ಕಾಗಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ತಮ್ನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತರಾಗಬೇಕು. ರೋಗ ಬರುವ ಮೊದಲೇ ವೈದ್ಯಕೀಯ ತಪಾಸಣೆ ಮಾಡಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತಿಮುಖ್ಯ ಎಂದರು.
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಮಾಡುವ ಚೈತನ್ಯ ವಿಮಾ ಪರಿಹಾರವನ್ನು ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆ ಒಂದು ಲಕ್ಷ ವಿಮಾ ಪರಿಹಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೈಂದೂರು ತಹಸೀಲ್ದಾರ್ ಪ್ರದೀಪ್ ಆರ್, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಿಇಒ ಪೂರ್ಣಿಮಾ, ರಾಜ್ಯ ಮೇಲ್ವಿಚಾರಕ ಹರಿನಾಥ್, ನಾವುಂದ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಶಂಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರ ಖಾರ್ವಿ, ಖ್ಯಾತ ನರರೋಗ ತಜ್ಞ ಪ್ರೊ.ಎ.ರಾಜ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎಂ ಚಂದ್ರಶೀಲ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ. ಪೂಜಾರಿ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಆರ್. ಗಾಣಿಗ, ಎಂ. ವಿನಾಯಕ ರಾವ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.