ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಿಕೊಂಡು ಉನ್ನತಿಯನ್ನು ಸಾಧಿಸುವ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸುತ್ತಾ ಶೈಕ್ಷಣಿಕ, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ಕುಸುಮ ಸಮೂಹ ಸಂಸ್ಥೆಗಳು ಇದೀಗ ರಜತ ಸಂಭ್ರಮದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಕುಸುಮಾಂಜಲಿ ಕಾರ್ಯಕ್ರಮವನ್ನು ಮತ್ತೆ ಆಯೋಜಿಸುವ ಮೂಲಕ ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಂಡಿದೆ.
ಕುಸುಮಾಂಜಲಿ 2023 – ನಳೀನ್ ಕುಮಾರ್ ಶೆಟ್ಟಿ
‘ಕುಸುಮಾಂಜಲಿ 2023’ ಕುಸುಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಡಿ.24ರ ಭಾನುವಾರ ಮಧ್ಯಾಹ್ನ ಗಂಟೆ 3 ರಿಂದ 10:30ರ ವರೆಗೆ ನಾಗೂರಿನ ‘ಕುಸುಮ ಗ್ರೂಪ್’ ಪರಿಸರದಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ದಿಕ್ಸೂಚಿ ಭಾಷಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕುಸುಮಾ ಗ್ರೂಪ್‌ನ ನಳೀನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 3ರಿಂದ ಬಿಸ್ ಕಾನ್ 2023 ವ್ಯವಹಾರ ಸಮ್ಮೇಳನ, 4 ಗಂಟೆಗೆ ಸಂಗೀತ ಸಂಧ್ಯಾ, 5:30ರಿಂದ ಕುಸುಮ ಫೌಂಡೇಶನ್ನ ಸಂಗೀತ ಹಾಗೂ ಕಲಾ ಶಾಲೆ ‘ಬ್ಲೋಸಮ್ ಸ್ಕೂಲ್ ಆಫ್ ಮ್ಯೂಸಿಕ್ & ಆರ್ಟ್ನ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಪದ ಸಂಗೀತ – ನೃತ್ಯ ಕಾರ್ಯಕ್ರಮ ನಡೆಯಲಿದೆ.
ಸಂಜೆ 7ಗಂಟೆಗೆ ಕುಸುಮಾ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ನಳೀನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. 7:40ಕ್ಕೆ ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್, ಉಪ್ಪಿನಕುದ್ರು ಇದರ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಅವರಿಗೆ ಕುಸುಮಾಶ್ರೀ ಪ್ರಶಸ್ತಿ ಪ್ರದಾನ, 8 ಗಂಟೆಗೆ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ ಭಂಡಾರಿ ಅವರಿಂದ ದಿಕ್ಸೂಚಿ ಭಾಷಣ, ಬಳಿಕ ‘ಈಶಲಾಸ್ಯ ನಾಟ್ಯಾಲಯ’ ಸಾಲಿಗ್ರಾಮ ತಂಡದಿಂದ ನೃತ್ಯಾಂಜಲಿ ಕಾರ್ಯಕ್ರಮ ಜರುಗಲಿದೆ.
ಸಂಸ್ಥೆಯ ಸಲಹೆಗಾರರಾದ ವೀಗನ್ ಶಂಕರನಾರಾಯಣ ಕುಸುಮಾಂಜಲಿಯ ನಿರ್ದೇಶಕರಾದ ನಮೃತಾ ಉಪಸ್ಥಿತರಿದ್ದರು