ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ದೇಶದಲ್ಲಿ ಮಹಿಳೆಗೆ ಶ್ರೇಷ್ಠ ಸ್ಥಾನ ಸ್ಥಾನ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಅರಿವು ಮೂಡಿಸುವುದರಿಂದ ಇಂತಹ ಘಟನೆಗಳನ್ನು ತಗ್ಗಿಸಬಹುದು ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಸಂಚಾಲಕ ಮಹಮ್ಮದ್ ಷರೀಫ್ ಹೇಳಿದರು.
ಗುರುವಾರ ಇಲ್ಲಿನ ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಆಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಉಡುಪಿ ಜಿಲ್ಲಾ ತಂಡದಿಂದ ಆಯೋಜಿಸಲಾದ ಅರಿವಿನ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ತ್ರೀ ಪುರುಷ ಅರಿತು ಬದುಕಿದರೆ ಸುಖೀ ಬದುಕು ಸಾಧ್ಯವಿದೆ. ಪ್ರತಿಯೋರ್ವರಿಗೂ ತಮ್ಮದೇ ಆದ ಸಾಮರ್ಥ್ಯವಿದೆ. ಅದನ್ನು ಅರಿತು ಬದುಕುವುದು ಮುಖ್ಯ. ಮಹಿಳೆಯರ ಮೇಲೆ ಯಾವುದೇ ಬಗೆಯಲ್ಲಿ ದೌರ್ಜನ್ಯ ನಡೆದರೂ ಅದನ್ನು ಪ್ರತಿಭಟಿಸುವಂತಾಗಬೇಕು. ಹಾಗೆಯೇ ಮಹಿಳಾ ಪರ ಕಾನೂನುಗಳು ಸದ್ಬಳಕೆಯಾಗಬೇಕು ಎಂದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಉದ್ಘಾಟಿಸಿದರು.
ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಅಮಿತಾ ಶೆಟ್ಟಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವಾಣಿ ಮಂಗಳೂರು ಭಾಗವಹಿಸಿದ್ದರು.
ಕಾರ್ಯದರ್ಶಿ ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ, ನಿರೂಪಿಸಿದರು. ಪತ್ರಕರ್ತ ಕೃಷ್ಣ ಬಿಜೂರು ವಂದಿಸಿದರು.