ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಊರಿನ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತು, ಉತ್ತಮ ನಾಗರಿಕರು ರೂಪುಗೊಂಡಾಗ ಅಲ್ಲಿ ಅಭಿವೃದಿಗೆ ಅಗತ್ಯವಿರುವ ವಾತಾವರಣ ನಿರ್ಮಾಣವಾಗುತ್ತದೆ. ಅಂತವರು ನೈಜ ಅಭಿವೃದ್ಧಿಯೆಡೆಗೆ ಊರನ್ನು ಮುಂದಕ್ಕೊಯ್ಯುತ್ತಾರೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಈಚೆಗೆ ನಡೆದ ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ರಜತ ಸಂಭ್ರಮದಲ್ಲಿ ಅವರು ಮಾತನಾಡಿದರು.
ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಕೈಗಾರಿಕಾ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿಕೊಂಡು ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸರ್ವೋತ್ತಮ ಭಟ್ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಖಾರ್ವಿ ಧ್ವಜಾರೋಹಣ ಮಾಡಿದರು. ಕೋಲಾರ ಜಿಲ್ಲೆಯ ಮಾಲೂರಿನ ಶಿಕ್ಷಣ ಪ್ರೇಮಿ ರಾಮಕೃಷ್ಣ ಮತ್ತು ಸ್ನೇಹಿತರು ಶಾಲೆಗೆ ನೀಡಿದ ಸ್ಮಾರ್ಟ್ ಕ್ಲಾಸ್ ಹಾಗೂ ಎಸ್ಸೆಸೆಲ್ಸಿ ಮೊದಲ ತಂಡದ ವಿದ್ಯಾರ್ಥಿಗಳು ನೀಡಿದ ಪ್ರಯೋಗಾಲಯ, ಕವಾಟ ಇತ್ಯಾದಿ ಕೊಡುಗೆಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹಿಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಗುರುಗಳನ್ನು, ವಿಶೇಷ ದಾನಿಗಳನ್ನು ಸನ್ಮಾನಿಸಲಾಯಿತು.
ಪೂರ್ವ ವಿದ್ಯಾರ್ಥಿ ಸಂತೋಷಕುಮಾರ್ ಸ್ವಸ್ತಿವಾಚನ ಮಾಡಿದರು. ವಿದ್ಯಾಂಗ ಉಪ ನಿರ್ದೇಶಕ ಕೆ. ಗಣಪತಿ, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಬಳೆಗಾರ್, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಪಟಗಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಾ ಪೂಜಾರಿ, ಸದಸ್ಯೆ ವನಜಾ ಪೂಜಾರಿ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅರುಣಕುಮಾರ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಉದ್ಯಮಿಗಳಾದ ಎಂ. ರಾಜಶೇಖರ ಹೆಬ್ಬಾರ್, ಸತ್ಯನಾರಾಯಣ ಹೊಳೆಬಾಗ್ಲು, ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಎಂ. ಎಲ್. ಭಟ್, ಶಾಲಾ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ, ಖಂಬದಕೋಣೆ ಆರ್. ಕೆ. ಸಂಜೀವ ರಾವ್ ಟ್ರಸ್ಟ್‌ನ ಅಧ್ಯಕ್ಷ ಸಂಜೀತ ಪ್ರಕಾಶ ರಾವ್, ಹಿರಿಯ ಸಹಕಾರಿ ಎಸ್. ರಾಜು ಪೂಜಾರಿ, ವಿದಾರ್ಥಿ ನಾಯಕ ಪ್ರೀತಮ್, ನಾಯಕಿ ಸಾಕ್ಷಿತಾ ಇದ್ದರು. ರವಿ ಮಡಿವಾಳ ವಂದಿಸಿದರು. ಶಿಕ್ಷಕರು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿತವಾದುವು./