ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಂಸ್ಥೆ ರೂಪಿಸುವ ಕನಸಿನೊಂದಿಗೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವ ಸಂಸ್ಥಾಪಕರನ್ನು ಗೌರವಿಸುವ “ಸಪ್ತಸ್ವರ” ಕಾರ್ಯಕ್ರಮ ಕಲ್ಯಾಣಪುರದ “ಮಿಲಾಗ್ರಿಸ್ ತ್ರಿಶತಮಾನೋತ್ಸವ” ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಪ್ತ ಸಂಸ್ಥಾಪಕರೂ ಆಗಮಿಸಿ ಗೌರವವನ್ನು ಸ್ವೀಕರಿಸಿ, ಮಾತನಾಡಿದರು.
ಸಂಸ್ಥಾಪಕರಲ್ಲಿ ಓರ್ವರಾದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅವರು ತ್ರಿಶಾ ವಿದ್ಯಾ ಸಂಸ್ಥೆಯನ್ನು ಆರಂಭಿಸಿದಾಗ ಸಹಜವಾಗಿ ಎಲ್ಲರಲ್ಲೂ ಕುತೂಹಲ ನಿರೀಕ್ಷೆಗಳಿದ್ದವು. ಇಂದು ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಬೆಳೆಸಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು, ಸಂಸ್ಥಾಪಕರಾದ ಅಮೃತ್ ರೈ ಮಾತನಾಡಿ ಯಾವ ವಿದ್ಯಾರ್ಥಿಯೂ ಶಿಕ್ಷಣದ ವ್ಯವಸ್ಥೆಯಲ್ಲಿ ಹಿಂದುಳಿಯಬಾರದೆಂಬ ಉದ್ದೇಶ ಹೊಂದಿದ್ದೇವೆ. ಸಂಸ್ಥೆ ಸದಾಕಾಲ ವಿದ್ಯಾರ್ಥಿಗಳ ಅಭ್ಯುದಯ ಬಯಸುತ್ತದೆ ಎಂದು ತಿಳಿಸಿದರು. ಸಂಸ್ಥಾಪಕರಾದ ಆದರ್ಶ ಎಂ.ಕೆ ಸಂಸ್ಥೆ ಇದುವರೆಗೆ ಎದುರಿಸಿದ ಸವಾಲುಗಳು ಹಾಗೂ ಸಮಸ್ಯೆಗಳನ್ನು ಮೆಲುಕು ಹಾಕಿದರು.
ಇನ್ನೋರ್ವ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಮಾತನಾಡಿ ನಮ್ಮ ತಂದೆ ತಾಯಿ ಹಾಗೂ ಗುರುಹಿರಿಯರ ಮಾರ್ಗದರ್ಶನದಿಂದ ನಾವು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇಂತಹ ಯಾವುದೇ ಕಾರ್ಯಕ್ರಮಗಳ ಅಪೇಕ್ಷೆ ಇಲ್ಲದೆ ಪ್ರೀತಿಪೂರ್ವಕವಾಗಿ ಸೇವೆ ಮಾಡುತ್ತಿದ್ದೇವೆ. ಅಂತೆಯೇ ನಿಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮತ್ತೋರ್ವ ಸಂಸ್ಥಾಪಕರಾದ ಗಣಪತಿ ಕೆ. ಎಸ್ ಮಾತನಾಡಿ ನಮ್ಮ ಶೈಕ್ಷಣಿಕ ಸಹಭಾಗಿತ್ವದ ಮೂರೂ ಸಂಸ್ಥೆಗಳಲ್ಲಿ ಏಕರೂಪದ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
ಸಂಸ್ಥೆ ನಡೆದು ಬಂದ ರೀತಿ ಹಾಗೂ ಆಶಯದ ಬಗ್ಗೆ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ವಿವರಿಸಿದರು. ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಸ್ಥಾಪಕರಾದ ವಿಮಲ್ ರಾಜ್. ಜಿ ಮಾತನಾಡಿ ಪ್ರಾರಂಭದ ದಿನಗಳಿಂದ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವ್ಯವಸ್ಥೆಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸ್ಟಾನಿ ಲೋಬೋ ಅವರು ಸಪ್ತ ಸಂಸ್ಥಾಪಕರನ್ನು ಗೌರವಿಸಿ ಸನ್ಮಾನಿಸಿದರು.