ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾದ ಬಿ. ಕಿಶೋರ್ ಕುಮಾರ್ ಕುಂದಾಪುರ ಅವರನ್ನು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೇಮಿಸಿದ್ದಾರೆ.
ಕಿಶೋರ್ ಕುಮಾರ್ ಅವರು ಬಿಜೆಪಿ ಪಕ್ಷದಲ್ಲಿ ಕುಂದಾಪುರ ಮಂಡಲ ಬಿಜೆಪಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ರಾಜ್ಯ ಮೀನುಗಾರಿಕಾ ಪ್ರಕೋಷ್ಠದ ಸಂಚಾಲಕರಾಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂದರ್ಭ ವಿವಿಧ ಕ್ಷೇತ್ರಗಳ ಉಸ್ತುವಾರಿಯಾಗಿ ಸೇವೆಸಲ್ಲಿಸಿದ್ದರು. 2013ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿಯೂ ಕುಂದಾಪುರ ಅಥವಾ ಬೈಂದೂರು ಕ್ಷೇತ್ರದ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಅವರು ಹೆಸರು ಮುನ್ನೆಲೆಯಲ್ಲಿತ್ತು.
ಉದ್ಯಮಿಯಾಗಿರುವ ಕಿಶೋರ್ ಕುಮಾರ್ ಅವರು ರಾಜಕೀಯದ ಹೊರತಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು. ಹೋರಾಟಗಳ ಮುಂಚೂಣಿ ವಹಿಸಿದವರು. ಕುಂದಾಪುರ ರೋಟರ‍್ಯಾಕ್ಟ್ ಕ್ಲಬ್, ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯ ಮೂಲಕ ಸಾಂಸ್ಕೃತಿಕ ರಂಗದಲ್ಲಿಯೂ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.