ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಮಾಹಿತಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಬೇಕು, ಪ್ರತಿಯೊಬ್ಬರ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವುದರ ಮೂಲಕ 2047 ರೊಳಗೆ ಭಾರತ ಸಂಪೂರ್ಣ ವಿಕಸಿತವಾಗಬೇಕು ಎಂಬ ಸಂಕಲ್ಪದೊಂದಿಗೆ ದೇಶದಾದ್ಯಂತ ವಿಕಸಿತ ಭಾರತ ಅಭಿಯಾನ ಆರಂಭಿಸಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಕಿರಿಮಂಜೇಶ್ವರ ಗ್ರಾಮ ಪಂಚಾಯತ್, ಕೆನರಾ ಬ್ಯಾಂಕ್ ನಾವುಂದ ಶಾಖೆ ಇವರ ಸಹಯೋಗದೊಂದಿಗೆ ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಬರುತ್ತಿದ್ದು ಆರು ಲಕ್ಷ ಹಳ್ಳಿಗಳು ಈ ತಂತ್ರಜ್ಞಾನದ ಪ್ರಯೋಜನ ಪಡೆದು ಯಶಸ್ವಿಯಾಗಿದ್ದಾರೆ ಎಂದರು.
ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ ಅಧ್ಯಕ್ಷತೆವಹಿಸಿದ್ದರು. ಕೆನರಾ ಬ್ಯಾಂಕ್ ಆರ್ಥಿಕ ಸಮಾಲೋಚಕಿ ಮೀರಾ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜಯಪ್ರಕಾಶ್, ಜಿಲ್ಲಾ ಆಸ್ಪತ್ರೆ ಆರೋಗ್ಯ ಮಿತ್ರ ಸುಷನಮಾಲಾ, ಬ್ರಹ್ಮಾವರ ರುಡ್ಸೆಟ್ ಉಪನ್ಯಾಸಕ ಕರುಣಾಕರ ಜೈನ್, ಕೃಷಿ ಅಧಿಕಾರಿ ಅನುಷಾ, ಅಂಚೆ ಇಲಾಖೆಯ ಜೀವನ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಡ್ವಿನ್ ಸೆಬಾಸ್ಟಿಯನ್ ತಮ್ಮ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಆಧುನಿಕ ಡ್ರೋನ್ ತಂತ್ರಜ್ಞಾನದ ಮೂಲಕ ಕೀಟನಾಶಕವನ್ನು ಸಿಂಪಡಿಸುವುದು ಬಗ್ಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆ ತೋರಿಸಲಾಯಿತು. ವಿಕಸಿತ ಭಾರತದ ಮಾಹಿತಿ ಕೈಪಿಡಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಪಿಎಂಇಜಿವೈ ಯೋಜನೆಯಡಿ ಸಾಲ ಪಡೆದುಕೊಂಡ ಫಲಾನುಭವಿಗೆ ಸಾಲಪತ್ರ ವಿತರಿಸಲಾಯಿತು. ಅಂತಿಮವಾಗಿ ಪ್ರಧಾನಿ ಭಾಷಣ ಮತ್ತು ಯೋಜನೆಗಳ ಮಾಹಿತಿಯನ್ನೊಳಗೊಂಡ ವಿಡಿಯೊ ಪ್ರದರ್ಶನ ನಡೆಯಿತು. ಪಿಡಿಒ ರಾಜೇಶ್ ಸ್ವಾಗತಿಸಿ, ರೂಪ ಬಿ. ವಿ. ನಿರೂಪಿಸಿದರು. ಚಂದ್ರ ಶೆಟ್ಟಿ ವಂದಿಸಿದರು.