ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಮ ಎಂದರೆ ಕಾಲ್ಪನಿಕ ವ್ಯಕ್ತಿಯಲ್ಲ. ಭಗವಂತನ ರೂಪದಲ್ಲಿ ಭೂಮಿಯಲ್ಲಿ ನೆಲೆಸಿ ಅದ್ಭುತ ಲೀಲೆಗಳನ್ನು ಸೃಷ್ಟಿಸಿ ಪ್ರತಿ ಭಕ್ತರ ಹೃದಯದಲ್ಲಿ ವಿರಾಜಮಾನನಾಗಿರುವ ಚೇತನ ಎಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಮಹಾರಾಜ್ ಅವರು ಹೇಳಿದರು.
ಯಳಜಿತದ ಶ್ರೀ ರಾಮಕೃಷ್ಣ ಕುಟೀರ, ಹಿಂದೂ ಐಕ್ಯ ವೇದಿಕೆ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಸೋಮವಾರ ಶ್ರೀ ರಾಮೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕೋಟಿ ರಾಮ ನಾಮ ಜಪ ಯಜ್ಞ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಆಶೀರ್ವಚನ ನೀಡಿದರು.
ಪ್ರಭು ಶ್ರೀರಾಮ ಇಡೀ ಭಾರತವನ್ನು ವ್ಯಾಪಿಸಿಕೊಂಡಿದ್ದಾನೆ. ದೇಶದ ಯಾವುದೇ ಮೂಲೆಗೆ ತೆರಳಿದರೂ ರಾಮನ ಕುರಿತಾದ ಒಂದಿಲ್ಲೊಂದು ಪುರಾಣ ಕಥೆಗಳಿವೆ. ಕರ್ನಾಟಕದಲ್ಲಿಯೂ ರಾಮ ಓಡಾಡಿದ ಅನೇಕ ಕುರುಹುಗಳಿವೆ. ಹನುಮಂತ ದೇವರು ಅಂಜನಾದ್ರಿಯವರು ಎಂಬುದೇ ಹೆಮ್ಮೆ. ಕರ್ನಾಟಕದ ಶಿಲೆಯಿಂದಲೇ ರಾಮಲಲ್ಲಾನ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದರು.
ರಾಮಾಯಣ ಭಾರತದ ಸಂಸ್ಕೃತಿಯ ಅಡಿಪಾಯ. ಅದು ಸಾಮಾನ್ಯರಿಗೂ ಧರ್ಮಮಾರ್ಗವನ್ನೂ, ಬದುಕನ್ನು ಜಯಿಸುವ ದಾರಿಯನ್ನು ತೋರಿದೆ. ರಾಮನಾಪ ಜಪವನ್ನು ಸದಾಕಾಲ ಮಾಡಿದರೆ, ಸರಿಯಾದ ದಾರಿಯಲ್ಲಿ ನಡೆದರೆ ಭಗವಂತನ ದರ್ಶನ ಸಾಧ್ಯವಿದೆ ಎಂದರು.
ಪ್ರಭು ಶ್ರೀರಾಮನಿಗೂ ಹಾಗೂ ಶ್ರೀ ರಾಮಕೃಷ್ಣ ಆಶ್ರಮಕ್ಕೂ ಧೀರ್ಘವಾದ ಸಂಬಂಧವಿದೆ. ರಾಮಕೃಷ್ಣರು ತಂದೆ ಶ್ರೀರಾಮನ ಆರಾಧಕರಾಗಿದ್ದರೇ, ರಾಮಕೃಷ್ಣರೂ ಸ್ವತಃ ರಾಮನನ್ನು ಕಂಡವರು. ಏಕಾದಶಿಯ ದಿನ ರಾಮಕೃಷ್ಣ ಆಶ್ರಮಗಳಲ್ಲಿ ರಾಮನಾಮ ಸಂಕೀರ್ತಣೆ ನಡೆಯುತ್ತದೆ. ರಾಮನ ಮಂಟಪದ ಮುಂಭಾಗದಲ್ಲಿ ಹನುಮಾನ್ ದೇವರಿಗೂ ವಿಶೇಷ ಆಸನ ಇರಿಸಿ ಪೂಜಿಸಲಾಗುತ್ತದೆ ಎಂದರು.
ನಮ್ಮ ಆಧ್ಯಾತ್ಮಿಕ ಸಂಪತ್ತನ್ನು ಮಕ್ಕಳಿಗೆ ತಿಳಿಹೇಳುವ ಕೆಲಸವನ್ನೇ ಪೋಷಕರು ಹಾಗೂ ಸಮಾಜ ಮರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಕುಟೀರವು ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿದೆ. ಭೇದಭಾವವಿಲ್ಲದೇ ಎಲ್ಲಾ ವರ್ಗದ ಮಕ್ಕಳಿಗೂ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುತ್ತಿದ್ದಾರೆ. ಇದು ಕೇವಲ ದೇವರ ಸೇವೆ ಮಾತ್ರವೇ ಅಲ್ಲದೇ ದೇಶಸೇವೆಯೂ ಆಗಿದೆ.
ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ವೇಳೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.
ರಾಮೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಆಶ್ರಮದ ವಿದ್ಯಾರ್ಥಿಗಳಿಂದ ವಿವಿಧ ಸ್ತೋತ್ರ ಪಠಣ, ನೃತ್ಯ ರೂಪಕ ಪ್ರದರ್ಶನ, ಕೋಟಿ ರಾಮ ನಾಮ ಜಪ ಯಜ್ಞದ ಪೂರ್ಣಾಹುತಿ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಜರುಗಿದವು.