ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಋಷಿ ಮುನಿಗಳ ಕಾಲದಿಂದಲೂ ಬಂದಿರುವ ಆಯುರ್ವೇದ ಚಿಕಿತ್ಸಾ ಪದ್ದತಿಯ ಮೂಲ ವ್ಯವಸ್ಥೆಯನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ೨೦೧೪ರಲ್ಲಿ ಕೇಂದ್ರ ಆಯುಷ್ ಇಲಾಖೆ ಮೂಲಕ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಚಾಲನೆ ನೀಡಿದರು. ಆಯುರ್ವೇದವೂ ಕೂಡ ವಿಜ್ಞಾನವೇ ಆಗಿದ್ದು, ನಾಟಿಮದ್ದು ಎಂಬ ಜನರ ಭಾವನೆಗಳನ್ನು ದೂರೀಕರಿಸಲು ಇಂತಹ ಮಾಹಿತಿ ಕಾರ್ಯಕ್ರಮಗಳು ಇಂದಿನ ಅನಿವಾರ್ಯ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಕಾಲ್ತೋಡು ಸರ್ಕಾರಿ ಆಯುಷ್ ಚಿಕಿತ್ಸಾಲಯದ ಆವರಣದಲ್ಲಿ ಶನಿವಾರ ಆಯುಷ್ ಇಲಾಖೆ ಬೆಂಗಳೂರು ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಪಂ ಕಾಲ್ತೊಡು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೩-೨೦೨೪ನೇ ಸಾಲಿನ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಆಯುಷ್ ಸೇವಾ ಗ್ರಾಮ ಉದ್ಘಾಟಿಸಿ ಮಾತನಾಡಿದರು. ಸಮಯಕ್ಕೆ ಸರಿಯಾಗಿ ಉತ್ತಮ ಹಾಗೂ ಹಿತಮಿತವಾದ ಆಹಾರ ಸೇವನೆ, ಸರಿಯಾದ ಪ್ರಮಾಣದ ನಿದ್ರೆ, ಜ್ಞಾನವನ್ನು ವೃದ್ಧಿಸುವ ಬ್ರಹ್ಮಚರ್ಯೆ ಇವುಗಳು ಆರೋಗ್ಯದ ಆಧಾರಸ್ಥಂಭಗಳು. ಪ್ರತಿಯೊಬ್ಬರೂ ಮೊದಲು ತಮ್ಮ ಕುಟುಂಬ, ಸಮಾಜದ ಸಂಬಂಧಗಳು ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಥಮ ಆದ್ಯತೆ ಕೊಟ್ಟಾಗ ಮಾತ್ರ ಪರಿಪೂರ್ಣ ಆರೋಗ್ಯವಂತನಾಗಲು ಸಾಧ್ಯವಾಗುತ್ತದೆ ಎಂದರು.
ಕಾಲ್ತೋಡು ಗ್ರಾಪಂ ಅಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಫಲಾನುಭವಿಗಳಿಗೆ ಆಯುಷ್ ಕಿಟ್ ಹಾಗೂ ಔಷಧಿ ಸಸ್ಯಗಳನ್ನು ವಿತರಿಸಲಾಯಿತು. ಗ್ರಾಪಂ ಉಪಾದ್ಯಕ್ಷೆ ಗೌರಿ ಪೂಜಾರಿ, ಶ್ರೀಕ್ಷೇತ್ರ ಬೊಳಂಬಳ್ಳಿ ದೇವಳದ ಆಡಳಿತ ಧರ್ಮದರ್ಶಿ ಧರ್ಮರಾಜ್ ಜೈನ್, ಸಮೃದ್ಧ ಬೈಂದೂರು ಸಂಚಾಲಕ ಬಿ. ಎಸ್. ಸುರೇಶ ಶೆಟ್ಟಿ, ನೇತೃತಜ್ಞೆ ಡಾ. ರಶ್ಮಿ ಶೆಟ್ಟಿ ಇದ್ದರು. ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸುಂದರ್ ಜಿ. ನಿರೂಪಿಸಿ, ಗ್ರಾಪಂ ಪಿಡಿಒ ದಿವಾಕರ ಶ್ಯಾನುಭಾಗ್ ವಂದಿಸಿದರು. ನಂತರ ಉಚಿತ ಕಣ್ಣಿನ ತಪಾಸಣೆ, ಉಚಿತ ಆಯುಷ್ ಆರೋಗ್ಯ ತಪಾಸಣೆ ನಡೆಯಿತು.










