ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಫೆ.28: ತಾಲೂಕಿನ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಯ ಕಾರ್ಯಕರ್ತರು ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿರಿಸಿದೆ.
ಶಿರೂರಿನ ದಲಿತ ಮುಖಂಡರಾದ ರಾಘವೇಂದ್ರ ಹಾಗೂ ರಮೇಶ್ ಶಿರೂರು ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದು ಸ್ಥಳೀಯ ದಲಿತ ಸಂಘಟನೆ ಮುಖಂಡರು ಅವರೊಂದಿಗೆ ಕೈಜೋಡಿಸಿದ್ದಾರೆ.
ಈ ಸಂದರ್ಭ ರಾಘವೇಂದ್ರ ಶಿರೂರು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳೇ ಕಳೆದರೂ ಬೈಂದೂರಿನ ಶಿರೂರಿನಲ್ಲಿ ಡಿಸಿ ಮನ್ನಾ ಭೂಮಿ ಹಂಚದ ಉಡುಪಿ ಜಿಲ್ಲಾಡಳಿತವು ದಲಿತರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯುವಂತೆ ಮಾಡಿ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೋಲೆ ಮಾಡಿ ದಲಿತ ವಿರೋಧಿ ನಡವಳಿಕೆ ತೋರಿದ್ದಾರೆ. ಇಂತಹ ವ್ಯವಸ್ಥೆಗೆ ಕಡಿವಾಣ ಬೀಳಬೇಕಿದೆ ಎಂದರು.
ರಮೇಶ್ ಶಿರೂರು ಅವರು ಮಾತನಾಡಿ, ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚುವಂತೆ ನೂರಾರು ಬಾರಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಲೇ ಬಂದಿದ್ದಾರೆ ಆದರೆ ದಲಿತರಿಗೆ ನ್ಯಾಯ ದೊರೆತಿಲ್ಲ. ಡಿಸಿ ಮನ್ನಾ ಭೂಮಿಯನ್ನು ಬೇರೆಯವರು ಅತಿಕ್ರಮಿಸಿಕೊಂಡರೂ ಆಡಳಿತ ಮೌನವಹಿಸಿದೆ. ಜಿಲ್ಲಾಧಿಕಾರಿಗಳಿಗೆ ತಪ್ಪು ಸಂದೇಶ ರವಾಸಿಸಿ ದಲಿತರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಈ ಸತ್ಯಾಗ್ರಹ ಮಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಧರಣಿಯಲ್ಲಿ ಅಂಬೇಡ್ಕರ್ ಯುವಸೇನೆ ಬೈಂದೂರು ತಾಲೂಕು ಅಧ್ಯಕ್ಷ ರಾಮ ಎಂ.ಮಯ್ಯಾಡಿ, ಬೈಂದೂರು ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ರಂಗ ಯಡ್ತರೆ, ದಲಿತ ಮುಖಂಡರಾದ ಮಾದೇವ, ಮಹಾಲಕ್ಷ್ಮೀ ಬೈಂದೂರು, ಈಶ್ವರ್ ಶಿರೂರು, ವಾಸು ಶಿರೂರು, ಮಂಜುನಾಥ ಶಿರೂರು, ಮಂಗಳಾ ಶಿರೂರು, ಲಕ್ಷ್ಮೀ ಶಿರೂರು, ಚೇತನ್, ನಾರಾಯಣ ಬೈಂದೂರು, ಮಹಾದೇವ ತೊಂಡೆಮಕ್ಕಿ, ಮಹಾದೇವ ಬೈಂದೂರು ಉಪಸ್ಥಿತರಿದ್ದರು.
ಪ್ರತಿಭಟನೆಗೆ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ದಲಿತ ಸಂಘರ್ಷ ಸಮಿತಿಯೂ ಬೆಂಬಲ ಸೂಚಿಸಿದೆ.