ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಮುಖ್ಯವಾಗಿ ಉಪಕಾರ ಮಾಡುವ ಸಮಾಜವೇ ವಿನಹ: ಅಪಕಾರ ಮಾಡುವ ಸಮಾಜವಲ್ಲ. ಜನರ ಒಳಿತನ್ನೇ ಬಯಸುತ್ತದೆ ವಿನಹ: ಕೆಟ್ಟ ಚಿಂತನೆ ಮಾಡುದಿಲ್ಲ ಎಂಬುದನ್ನು ನಾರಾಯಣ ಮಲ್ಯರು ಮೂರ್ತಿ ಪ್ರತಿಷ್ಠಾಪನೆ ಮೂಲಕ ತೋರಿಸಿಕೊಟ್ಟಿದ್ದಾರೆ. ಪಂಚ ನದಿಗಳ ಸಂಗಮವಾಗುವ ಪವಿತ್ರವಾದ ಗಂಗೊಳ್ಳಿಯು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಗೆ ಎರಡು ಯತಿಗಳನ್ನು ನೀಡಿದ ಶ್ರೇಷ್ಠ ಕ್ಷೇತ್ರವಾಗಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವದ ನಿಮಿತ್ತ ಮೊಕ್ಕಾಂಗೆ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪ್ರಾರಂಭಗೊಂಡು ಮುಂದಿನ ವರ್ಷ 550 ಪೂರ್ಣಗೊಳ್ಳುತ್ತಿದೆ. ಇದರ ಉದ್ದೇಶಕ್ಕಾಗಿ ಮತ್ತು ಮಠದ ಮೂಲ ಶ್ರೀ ರಾಮ ದೇವರ ಪ್ರೀತ್ಯರ್ಥ 550 ದಿನಗಳ 550 ಕೋಟಿ ರಾಮತಾರಕ ಮಂತ್ರ ಜಪ ಅಭಿಯಾನ ಪ್ರಾರಂಭಿಸುವ ಸಂಕಲ್ಪ ಮಾಡಲಾಗಿದ್ದು, ಈ ಪುಣ್ಯ ಸ್ಥಳದಲ್ಲಿ ಈ ಅಭಿಯಾನದ ಉದ್ಘೋಷ ಮಾಡುತ್ತಿದ್ದೇವೆ. ಈ ಅಭಿಯಾನ ಎ.17ರಿಂದ ಪ್ರಾರಂಭಗೊಂಡು 2025ರ ಅ.18ರ ಪರ್ಯಂತ 550 ದಿನಗಳ ಕಾಲ ಈ ಅಭಿಯಾನ ಪ್ರಚಲಿತದಲ್ಲಿರುತ್ತದೆ. 550 ದಿನ, 550 ಕೋಟಿ, 550 ವರ್ಷಗಳ ಮಹೋತ್ಸವನ್ನು ಪರ್ತಗಾಳಿಯ ಮಠದಲ್ಲಿ ಮುಂದಿನ ವರ್ಷ ಸಮಾಜ ಬಾಂಧವರೊಂದಿಗೆ ಸೇರಿಕೊಂಡು ಆಚರಿಸಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ದೇವಳದ ಆಡಳಿತ ಮಂಡಳಿ ಸದಸ್ಯ ಜಿ. ವೇದವ್ಯಾಸ ಕೆ. ಆಚಾರ್ಯ ಮತ್ತು ಜಿ.ವೆಂಕಟೇಶ ನಾಯಕ್ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ, ತಾಂತ್ರಿಕ ಜಿ. ವಸಂತ ಭಟ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪುರೋಹಿತರು, ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್ ಸ್ವಾಗತಿಸಿದರು.