ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಗೋಪಾಲ ಪೂಜಾರಿ ಅವರ ಸೋಲು ಇಂದಿಗೂ ನಮಗೆ ಆಘಾತಕಾರಿಯಾಗಿದ್ದು, ಅವರ ಸೋಲಿನ ನೋವನ್ನು ಗೀತಾ ಶಿವರಾಜಕುಮಾರ್ ಅವರ ಗೆಲುವಿನೊಂದಿಗೆ ಮರೆಯೋಣ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಬೈಂದೂರು – ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೂರು ಸಾಲಿಮಕ್ಕಿಯಲ್ಲಿ ಗುರುವಾರ ಜರುಗಿದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ದಿವಂಗತ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಜನರಿಗಾಗಿ ನೀಡಿದ ಕೊಡುಗೆಗಳು ಇಂದಿಗೂ ಜಾರಿಯಲ್ಲಿದೆ. ರಾಜ್ಯ ಕಾಂಗ್ರೆಸ್ ಸರಕಾರದ ನೀಡಿದ ಗ್ಯಾರೆಂಟಿ ಯೋಜನೆಗಳು ಪ್ರತಿ ಮನೆಯನ್ನೂ ತಲುಪಿದೆ. ಗೀತಾ ಶಿವರಾಜಕುಮಾರ್ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಿ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ತಂದೆಯವರು ಜನರಿಗಾಗಿ ನೀಡಿದ ಯೋಜನೆಗಳು ಕೋಟ್ಯಂತರ ಮಂದಿಗೆ ನೆರವಾಗಿದೆ. ಅವರ ಜನಸೇವೆಯ ದಾರಿಯಲ್ಲಿಯೇ ಮುಂದುವರಿಯಬೇಕೆಂಬ ಆಸೆ ನನ್ನದು. ಈ ಭಾರಿ ಗೆಲುವಿಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.
ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಆಯನೂರು ಮಂಜುನಾಥ್, ನಟ ಶಿವರಾಜಕುಮಾರ್ ಮಾತನಾಡಿದರು.
ಮುಖಂಡರುಗಳಾದ ಜಿ. ಎ. ಬಾವ, ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಕಾರ್ಯದರ್ಶಿ ಮೋಹನ್ ಪೂಜಾರಿ, ಭರತ್ ದೇವಾಡಿಗ, ಮಂಜುನಾಥ ಪೂಜಾರಿ, ಗಿರೀಶ್ ಪೂಜಾರಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕೆಪಿಸಿಸಿ ಸದಸ್ಯ ರಘುರಾಮ ಶೆಟ್ಟಿ ಸ್ವಾಗತಿಸಿದರು. ಕಿರಣ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.