ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಗ್ನಿಶಾಮಕದವರು ಬೆಂಕಿ ಬಿದ್ದಾಗ ಮಾತ್ರ ಬರುವವರು ಎಂಬ ಭಾವನೆ ಜನರಲ್ಲಿ ಇದೆ ಆದರೆ ಅಗ್ನಿ ಅವಘಡಗಳಲ್ಲದೆ ಚಂಡಮಾರುತ, ಭೂಕುಸಿತ, ನೆರೆಹಾವಳಿ, ಮುಂತಾದ ಪ್ರಾಕೃತಿಕ ವಿಕೋಪಗಳಲ್ಲದೆ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ, ಜೀವ ರಕ್ಷಣೆ, ಪ್ರಾಣಿ ಪಕ್ಷಿಗಳ ಜೀವ ರಕ್ಷಣೆ ಸೇರಿದಂತೆ ತುರ್ತು ಸೇವೆಗಳಿಗೆ 24 ಗಂಟೆಗಳೂ ಕಾರ್ಯನಿರ್ವಹಿಸುವವರಾಗಿದ್ದೇವೆ ಎಂದು ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಶ್ರೀನಿವಾಸ ಪೂಜಾರಿ ಹೇಳಿದರು.
ಲಾವಣ್ಯ ಬೈಂದೂರು ಆಶ್ರಯದಲ್ಲಿ ಲಾವಣ್ಯ ರಂಗಮನೆಯಲ್ಲಿ ನಡೆಯುತ್ತಿರುವ ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರದ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ಮಾತನಾಡಿದರು. ಬೆಂಕಿ ಎಲ್ಲಿಯೇ ಆದರೂ ಒಂದೇ ಬಾರಿಗೆ ದೊಡ್ಡದಾಗಿ ಆವರಿಸಿಕೊಳ್ಳುವುದಿಲ್ಲ ಮೊದಲು ಸಣ್ಣ ಮಟ್ಟದಿಂದ ಶುರುವಾಗಿ ಅದನ್ನು ಹಾಗೆಯೇ ಬಿಟ್ಟಾಗ ಮಾತ್ರ ದೊಡ್ಡ ಮಟ್ಟಕ್ಕೆ ತಲುಪುತ್ತದೆ ಅದಕ್ಕಾಗಿ ಸಣ್ಣದಿರುವಾಗಲೇ ಹೇಗೆ ಅದನ್ನು ನಂದಿಸಬೇಕು ಎಂದು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ದೇಶಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಮಡಿದ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮೌನಚರಣೆಯ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ನಂತರ ರಂಗ ತರಬೇತಿ ಶಿಬಿರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಗ್ನಿ ಅವಘಡದ ಸುರಕ್ಷತೆಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಲಾಯಿತು. ಲಾವಣ್ಯದ ಅಧ್ಯಕ್ಷ ನರಸಿಂಹ ಬಿ. ನಾಯಕ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಸದಸ್ಯರಾದ ಮೂರ್ತಿ ಬೈಂದೂರು, ರೋಷನ್ ಕುಮಾರ್, ಶಶಾಂಕ್ ಕಾರಂತ್, ಸುರೇಶ್ ಬಂಕೇಶ್ವರ ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿಗಳು ಇದ್ದರು.