ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಸ್ತೆ ದುರಸ್ತಿಗಾಗಿ ಪಂಚಾಯತಿಗೆ ಹಲವು ಭಾರಿ ಬೇಡಿಕೆ ಇರಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ, ಭಾನುವಾರ ಗ್ರಾಮದ ಯುವಕರೇ ಒಟ್ಟಾಗಿ ರಸ್ತೆ ಹೊಂಡಗಳನ್ನು ಮುಚ್ಚಿ ದುರಸ್ತಿಗಳಿಸಿದ್ದಾರೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ದುರ್ಮಿಯ ತಿರಂಗಾ ಫ್ರೆಂಡ್ಸ್ ಸದಸ್ಯರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ರಾಹುತನಕಟ್ಟೆಯಿಂದ ದುರ್ಮಿಗೆ ತೆರಳುವ ಮಾರ್ಗ ಬಹುಪಾಲು ಸಿಮೆಂಟ್ ರಸ್ತೆಯಿದ್ದು, ಮಧ್ಯದಲ್ಲಿ ಡಾಂಬಾರು ರಸ್ತೆ ಮಾಡಲಾಗಿದೆ. ಕೆಲ ವರ್ಷದ ಹಿಂದೆ ಮಾಡಲಾಗಿದ್ದ ಡಾಂಬಾರು ರಸ್ತೆ ಕ್ರಮೇಣ ಕಿತ್ತು ಹೋಗಿದ್ದು, ಇದನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಬೈಂದೂರು ಪಟ್ಟಣ ಪಂಚಾಯತಿಗೆ ಬೇಡಿಕೆ ಇರಿಸಿದ್ದರು. ಆದರೆ ಸತತ ಮನವಿಯ ಬಳಿಕವೂ ಸ್ಪಂದಿಸದ ಕಾರಣ ಸುಮಾರು 15 ಮಂದಿ ದುರ್ಮಿಯ ತಿರಂಗಾ ಫ್ರೆಂಡ್ಸ್ ಸದಸ್ಯರು ಹಾಗೂ ಗ್ರಾಮಸ್ಥರು ಒಂದುಗೂಡಿ ತಾತ್ಕಾಲಿಕವಾಗಿ ರಸ್ತೆಯ ಹೊಂಡಗಳನ್ನು ಮುಚ್ಚಿದ್ದಾರೆ. ಸಿಮೆಂಟ್ ಮಿಕ್ಸ್ ಬಳಸಿ ಸುಮಾರು ಒಂದು ಕಿ.ಮೀ ತನಕದ ರಸ್ತೆಗೆ ತೆಪೆ ಹಾಕಲಾಗಿದೆ. ಈ ಹಿಂದೆಯೂ ಯುವಕರು ದುರ್ಮಿ ಮಾರ್ಗದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿದ್ದರು.