ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳು ಮೊಬೈಲ್ ಬಳಕೆ ಮತ್ತು ಟಿವಿಯಿಂದ ದೂರವಿರಬೇಕು. ಶಾಲೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಂತೆ ಕ್ರಮ ಜರುಗಿಸಲಾಗುವುದು ಎಂದು ಬೈಂದೂರು ಪಿಎಸ್‌ಐ (ಸಹಾಯಕ ತನಿಖೆ) ಮಹೇಶ ಕಂಬಿ ಹೇಳಿದರು.
ಬೈಂದೂರು ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ತೆರೆದಮನೆ ಕಾರ್ಯಕ್ರಮದಲ್ಲಿ ಅಲ್ಲಿನ ಯು. ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ನೀಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು. ತಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಬಗ್ಗೆ ಮಾಹಿತಿ ನೀಡಬೇಕು.
ವಿದ್ಯಾರ್ಥಿಗಳು ಜಾಗೃತರಾದರೆ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಮಸ್ಯೆಗಳ ಬಗ್ಗೆ ಪೊಲೀಸರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಪ್ರೀತಿ, ವಿಶ್ವಾಸ ಹಾಗೂ ಮನುಷ್ಯತ್ವದ ಸದೃಢ ವಿಚಾರಗಳಿಂದ ಸದೃಢ ರಾಷ್ಟ್ರ ನಿರ್ಮಿಸಲು ಎಲ್ಲರನ್ನು ಒಟ್ಟುಗೂಡಿಸಲು ಸಾಧ್ಯವಿದೆ ಎಂದ ಅವರು, ಒತ್ತಡದಲ್ಲಿರುವ ಯುವಜನಾಂಗ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮಾದಕ ದ್ರವ್ಯಗಳ ಉಪಯೋಗ ತಡೆಯುವಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ದುರ್ವೆಸನಿಗಳು, ಭೃಷ್ಟರು, ಅತ್ಯಾಚಾರಿಗಳು, ಕೊಲೆಗಡುಕರು ಹಾಗೂ ವ್ಯಭಿಚಾರಿಗಳು ಇಂತವರನ್ನು ನಾವು ದೂರವಿಡಬೇಕು ಎಂದು ಹೇಳಿದರು.
ನಂತರ ಪೊಲೀಸ್ ಠಾಣೆಯ ಕಾರ್ಯ ವೈಖರಿ, ಮಕ್ಕಳ ಹಕ್ಕುಗಳು, ಪೋಕ್ಸೋ ಕಾಯ್ದೆ, ರಸ್ತೆ ನಿಯಮಗಳು, ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸೂಕ್ತ ಕಾನೂನು ಮಾಹಿತಿಗಳನ್ನು ತಿಳಿಸಿದರು.
ಶಿಕ್ಷಕರಾದ ರವಿರಾಜ್, ಮಂಜುನಾಥ, ವಿದ್ಯಾ ಹಾಗೂ ಆರಕ್ಷಕ ಠಾಣೆಯ ಸಿಬಂದ್ದಿಗಳು ಇದ್ದರು.