ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ನಗರದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೂರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಪ್ಪೂರು ಮೂಲದ ಸಂತೋಷ್ ಆಚಾರ್ಯ (45 ವರ್ಷ) ಮೃತ ವ್ಯಕ್ತಿ.
ಕುಂದಾಪುರದ ಚಿಕ್ಕನಸಾಲು ರಸ್ತೆಯಲ್ಲಿ ಜೈ ಹಿಂದ್ ಹೋಟೆಲ್ ಎದುರಿನ ಬಾಡಿಗೆ ಕಟ್ಟಡದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದ ಸಂತೋಷ್ ಆಚಾರ್ಯ ಅವರ ಹಠಾತ್ ಸಾವು ಕುಟುಂಬಿಕರನ್ನು ಆತಂಕಕ್ಕೀಡುಮಾಡಿದೆ. ಅಲ್ಲಿಯೇ ಸಮೀಪ ವಾಸವಿದ್ದ ಮನೆಯಲ್ಲಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾಗರ ಪಂಚಮಿಯಂದು ಸತೋಷ್ ಅವರು ಮನೆಗೆ ತೆರಳದೇ ಇದ್ದುದರಿಂದ ಅವರ ಸಹೋದರ ಸುರೇಶ್ ಆಚಾರ್ಯ ಕರೆ ಮಾಡಿದ್ದರು. ಈ ವೇಳೆ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಅವರು ಅಣ್ಣ ವಾಸವಿದ್ದ ಮನೆಗೆ ಸ್ನೇಹಿತರೊಬ್ಬರನ್ನು ಕಳುಹಿಸಿ ವಿಚಾರಿಸಿದಾಗ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿದೆ ಎಂದು ತಿಳಿಸಿದ್ದಾರೆ. ಆಗಲೇ ಸಂತೋಷ್ ಆಚಾರ್ಯ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಂತೋಷ್ ಚಾಪೆಯ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದರು. ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಫ್ಯಾನ್ ತಿರುಗುತ್ತಿತ್ತು. ಮೊಬೈಲ್ ಇಯರ್ ಫೋನ್ ಕಿವಿಗೆ ಸಿಕ್ಕಿಸಿದ್ದು ಹಾಗೆಯೇ ಇತ್ತು. ಮಂಗಳವಾರ ರಾತ್ರಿ ಮಲಗಿದ್ದಾಗ ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಶವವನ್ನು ಸರಕಾರಿ ಆಸ್ಪತ್ರೆಯ ಶವಾಗರಕ್ಕೆ ಸಾಗಿಸಲಾಗಿದ್ದು ಬಳಿಕ ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಉಪ್ಪೂರು ನಿವಾಸಿಯಾದ ಸಂತೋಷ್ ಆಚಾರ್ಯ ಅವರು ಕುಂದಾಪುರದಲ್ಲಿ 25 ವರ್ಷಗಳಿಂದ ಚಿನ್ನದ ಕೆಲಸ ಮಾಡಿಕೊಂಡಿದ್ದು, ವಾರಕ್ಕೊಮ್ಮೆ ಉಪ್ಪೂರಿನಲ್ಲಿರುವ ತನ್ನ ಮನಗೆ ಹೋಗಿ ಬರುತ್ತಿದ್ದರು. ಅವರು ಅವಿವಾಹಿತರಾಗಿದ್ದರು.
ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ಅಗಲಿದ್ದಾರೆ.