ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಬೈಂದೂರು ಜನತೆಯ ದಶಕಗಳ ಹೋರಾಟ ಫಲವಾಗಿದ್ದು, ಇದರ ಹಿಂದೆ ಹಲವರ ಶ್ರಮವಿದೆ. ಯಾರ ವೈಯಕ್ತಿಕ ಹಿತ್ತಾಸಕ್ತಿ ಇದರಲ್ಲಿಲ್ಲ. ಬೈಂದೂರು ತಾಲೂಕಾಗಿ ಘೋಷಣೆಗೊಂಡಾಗ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳಿರುವುದನ್ನು ಗಮನಿಸಿ ತಾಲೂಕಿಗೊಂದು ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಚರ್ಚೆ ಆರಂಭಗೊಂಡು, ಅಂತಿಮವಾಗಿ ನ್ಯಾಯಾಲಯ ಉದ್ಘಾಟನೆಗೊಂಡಿತ್ತು. ಈಗ ಬೈಂದೂರು ನ್ಯಾಯಾಲಯದಲ್ಲಿ ಮೂರು ಸಾವಿರಕ್ಕಿಂತಲೂ ಹೆಚ್ಚಿನ ವಿವಿಧ ಪ್ರಕರಣಗಳಿದೆ. ಬೈಂದೂರಿಗೆ ಇನ್ನೂ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ಅವಶ್ಯಕತೆ ಇದೆ ಎಂದು ಬೈಂರೂರು ತಾಲೂಕು ಬಾರ್ ಅಸೋಸಿಯೇಶನ್ ಹೇಳಿದೆ.
ಕುಂದಾಪುರದ ವಕೀಲರಾದ ಕೆ. ಸಿ. ಶೆಟ್ಟಿ ಇವರು ತಮ್ಮ ದೂರಿನಲ್ಲಿ ಹೇಳಿಕೊಂಡಂತೆ ಬೈಂದೂರು ನ್ಯಾಯಾಲಯದ ಸ್ಥಿತಿ ಇರುವುದಿಲ್ಲ. ಬೈಂದೂರಿನಲ್ಲಿ ನ್ಯಾಯಾಲಯ ಪ್ರಾರಂಭಿಸುವ ಮೊದಲು ಕರ್ನಾಟಕದ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಪಂಚಾಯತ್ ಕಟ್ಟಡವನ್ನು ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನುಕೂಲವಾಗುವಂತೆ ಮಾರ್ಪಡಿಸಿ ಪ್ರಾರಂಭಿಸಲಾಗಿತ್ತು. ಬೈಂದೂರು ನ್ಯಾಯಾಲಯವನ್ನು ನಡೆಸಲು ಯಾವುದೇ ಪ್ರಾಥಮಿಕ ಅವಶ್ಯಕತೆಗಳ ಕೊರತೆ ಇಲ್ಲ. ಬೈಂದೂರು ನ್ಯಾಯಾಲಯವನ್ನು ಕುಂದಾಪುರಕ್ಕೆ ವರ್ಗಾಯಿಸುವಂತೆ ಉಚ್ಚ ನ್ಯಾಯಾಲಕ್ಕೆ ಕೇಳಿಕೊಂಡಿರುವುದು ಬೈಂದೂರಿನ ಜನತೆಗೆ ಮಾಡುವ ಅನ್ಯಾಯವಾಗಿದೆ ಎಂದಿದೆ.
ನ್ಯಾಯಾಲಯದಲ್ಲಿ ಕೊರತೆಗಳಿದ್ದರೆ ಸರ್ಕಾರ ಮತ್ತು ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯವು ಪರಿಹರಿಸುವ ವಿಷಯವೇ ಹೊರತು ನ್ಯಾಯಾಲಯವನ್ನು ದೂರದ ಕುಂದಾಪುರಕ್ಕೆ ವರ್ಗಾಯಿಸುವುದು ಪರಿಹಾರವಲ್ಲ. ಬೈಂದೂರು ನ್ಯಾಯಾಲಯನ್ನು ಕುಂದಾಪುರಕ್ಕೆ ವರ್ಗಾಯಿಸಲು ಬೈಂದೂರು ವಕೀಲರ ಸಂಘದ ತೀವ್ರ ಆಕ್ಷೇಪ ಇರುತ್ತದೆ. ಬೈಂದೂರು ವಕೀಲರ ಸಂಘವು ಕುಂದಾಪುರ ವಕೀಲ ಕೆ. ಸಿ. ಶೆಟ್ಟಿ ಇವರ ಬೈಂದೂರು ವಿರೋಧಿ ನಡೆಯನ್ನು ಖಂಡಿಸತ್ತದೆ. ಬೈಂದೂರು ವಕೀಲರ ಸಂಘವು ಸದಾ ಬೈಂದೂರು ಜನತೆಯೊಂದಿಗೆ ಬೈಂದೂರು ನ್ಯಾಯಾಲಯದ ಉಳುವಿಕೆಗೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ದವಿದೆ. ಬೈಂದೂರು ನ್ಯಾಯಾಲಯವು ಈಗ ಬಾಡಿಗೆ ಕಟ್ಟಡದಲ್ಲಿದ್ದು ಬೈಂದೂರಿನಲ್ಲಿ ನ್ಯಾಯಾಲಯಕ್ಕೆ ಕಾಯ್ದಿರಿಸಿದ ಸ್ಥಳದಲ್ಲಿ ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಮಾಡುವಂತೆ ಬೈಂದೂರುವಕೀಲರ ಸಂಘವು ಸರ್ಕಾರವನ್ನು ಈ ಸಂದರ್ಭದಲ್ಲಿ ಒತ್ತಾಯ ಮಾಡುತ್ತದೆ. ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯವು ಕುಂದಾಪುರದ ಕೆಲವು ವ್ಯಕ್ತಿಗಳ ವೈಯಕ್ತಿಕ ಹಿತ್ತಾಸಕಿಯನ್ನು ಪ್ರೋತ್ಸಾಹಿಸದೆ ನ್ಯಾಯಾಲಯನ್ನು ಬೈಂದೂರಿನಲ್ಲಿ ಉಳಿಸಿ ಬೈಂದೂರು ಜನತೆಗೆ ಅನ್ಯಾಯವಾಗದಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಬೈಂದೂರು ವಕೀಲರ ಸಂಘವು ಈ ಮೂಲಕ ಮನವಿ ಮಾಡಿಕೊಳ್ಳತ್ತದೆ ಎಂದು ಮೋಬಿ ಅವರು ತಿಳಿಸಿದ್ದಾರೆ.










