ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ತಾಲೂಕು ಪಂಚಾಯತ್ ತಾಲೂಕು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆದಿದ್ದು, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ತ್ರೈಮಾಸಿಕ ಕೆಡಿಪಿ ನಾಮನಿರ್ದೇಶಿತ ಸದಸ್ಯರ ನಡುವಿನ ಜಟಾಪಟಿಯಿಂದಾಗಿ ಶಾಸಕರು ಹೊರನಡೆದಿದ್ದು, ಸಭೆ ಅರ್ಧಕ್ಕೆ ಮೊಟಕುಗೊಂಡಿದೆ.
ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ:
ಸಭೆಯ ಆರಂಭದಲ್ಲಿ ಆರೋಗ್ಯ ಇಲಾಖೆಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ವಿವಿಧ ಸರಕಾರಿ ಆಸ್ಪತ್ರೆಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತ್ರಾಸಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸುವ ಬಗ್ಗೆ ನಿವೇಶನ ಗುರುತಿಸಲು ಈಗಾಗಲೇ ಸೂಚಿಸಲಾಗಿದ್ದು, ಅವರ ಪ್ರಗತಿಯ ಬಗ್ಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಿರಿಮಂಜೇಶ್ವರ ಆರೋಗ್ಯ ಕೇಂದ್ರಕ್ಕೆ 20 ಸೆಂಟ್ಸ್ ನಿವೇಶನ ಕಡಿಮೆಯಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ನಿವೇಶನ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ್ ಪ್ರತಿಕ್ರಿಯಿಸಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.




ನಿವೇಶನ ರಹಿತರಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡುವ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಕಾನೂನು ತೊಡಕು ಇಲ್ಲದ ನಿವೇಶನವನ್ನು ಶೀಘ್ರವಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಲು ಸೂಚಿಸಿದರು. ಪ್ರತಿ ಗುರುವಾರ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ ಕಡತದ ವಿಲೇವಾರಿ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಖಾಸಗಿ ಸಭೆ ನಡೆಸಿದ ಬಗ್ಗೆ ಜಟಾಪಟಿ:
ತ್ರೈಮಾಸಿಕ ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಜಗದೀಶ ದೇವಾಡಿಗ ಅವರು ಡಿಸಿ ಮನ್ನಾ ಭೂಮಿ ಮಂಜೂರಾಗಿದ್ದರೂ, ದಾಖಲೆ ವಿಳಂಬವಾಗುತ್ತಿರುವ ಬಗ್ಗೆ ಪ್ರಸ್ತಾಪಿಸುವ ಸಂದರ್ಭ ಶಾಸಕರು ತಮ್ಮ ಖಾಸಗಿ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿರುವುದರಿಂದ ಇಂತಹ ವಿಚಾರಗಳನ್ನು ಚರ್ಚಿಸಲು ಸಾಧ್ಯವಾಗದೇ ಜನರಿಗೆ ಅನ್ಯಾಯವಾಗುತ್ತಿದೆ. ಶಾಸಕರು ತಮ್ಮ ಅಧಿಕೃತ ಕಛೇರಿ ಅಥವಾ ಸರಕಾರಿ ಕಛೇರಿಯಲ್ಲಿಯೇ ಸಭೆ ನಡೆಸಿದರೆ ಜನರಿಗೂ ತಮ್ಮ ತೊಂದರೆ ಹೇಳಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಕೆಡಿಪಿ ಸದಸ್ಯ ಶೇಖರ್ ಪೂಜಾರಿ ಉಪ್ಪುಂದ, ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಸ್ಪಷ್ಟಪಡಿಸಿದ್ದು ಸರಕಾರ ಒದಗಿಸಿದ ಶಾಸಕರ ಕಛೇರಿಯಲ್ಲಿಯೇ ಸಭೆ ನಡೆಸುವುದು ಸೂಕ್ತ ಎಂದಿದ್ದಾರೆ. ಆದಾಗ್ಯೂ ಶಾಸಕರ ತಮ್ಮ ಖಾಸಗಿ ಕಛೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಅಧಿಕಾರಿಗಳ ಸಭೆ ನಡೆಸಿದ್ದು ಇದು ಸರಿಯಲ್ಲ ಎಂದರು. ಇದಕ್ಕೆ ಸದಸ್ಯರಾದ ನರಸಿಂಹ ಹಳಗೇರಿ, ಸತೀಶ್ ಶೆಟ್ಟಿ, ಗ್ರೀಷ್ಮಾ ಬೀಡೆ, ಮೌಲನಾ ದಸ್ತಗಿರಿ ಸಾಹೇಬ್ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಗಂಟಿಹೊಳೆ ಅವರು, ಕೆಡಿಪಿ ಸದಸ್ಯರು ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ಜಿಲ್ಲಾಧಿಕಾರಿಗಳು ನನಗೆ ಅಂತಹ ಯಾವುದೂ ಸೂಚನೆ ನೀಡಿಲ್ಲ. ರಾಜ್ಯ ಸರಕಾರದಿಂದ ಸಲಹೆ ಪಡೆಯುವುದಾಗಿ ತಿಳಿಸಿದ್ದಾರೆ. ಅನಗತ್ಯವಾಗಿ ಸಭೆಯಲ್ಲಿ ಆ ವಿಚಾರ ಪ್ರಸ್ತಾಪಿಸಬೇಡಿ. ಇದು ತಾಲೂಕು ಪಂಚಾಯತ್ ಸಭೆಯಲ್ಲ. ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ. ಇಲ್ಲಿ ರಾಜಕೀಯ ಮಾಡಬೇಡಿ. ನನ್ನ ಹಕ್ಕು ಏನು ಎಂದು ಕೆಡಿಪಿ ಸದಸ್ಯರು ತಿಳಿಸುವ ಅಗತ್ಯವಿಲ್ಲ ಎಂದರು. ಶಾಸಕರು ಹಾಗೂ ಕೆಡಿಪಿ ಸದಸ್ಯರುಗಳ ನಡುವೆ ವಾಗ್ವಾದ ನಡೆಯಿತು.
ಬಳಿಕ ಶಾಸಕರು ತಮ್ಮ ಹಕ್ಕುಚ್ಯುತಿ ಆಗುತ್ತಿದೆ ಎಂದು ಆರೋಪಿಸಿ ಸಭೆಯಿಂದ ಏಕಾಏಕಿ ಹೊರನಡೆದ ಹಿನ್ನೆಲೆಯಲ್ಲಿ ಕೆಡಿಪಿ ಸಭೆ ರದ್ದುಗೊಂಡಿತು. ಕೆಡಿಪಿ ಸದಸ್ಯರು ತಮ್ಮ ಸ್ಥಾನದಲ್ಲಿಯೇ ಕುಳಿತು ಶಾಸಕರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಬೈಂದೂರು ತಹಶಿಲ್ದಾರ್ ಪ್ರದೀಪ್ ಆರ್., ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಅನಿತಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
- ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಹಠಕ್ಕೆ ಬಿದ್ದು ನನ್ನ ಕೆಲಸಗಳಿಗೆ ಮಿತಿ ಹೇರಲು ಪ್ರಯತ್ನಿಸುತ್ತಿದ್ದಾರೆ. ಕೆಡಿಪಿ ಸಭೆ ಇಲಾಖೆಗಳ ಪ್ರಗತಿ ಪರಿಶೀಲನೆಗಾಗಿ ನಡೆಸುವುದು. ಅಲ್ಲಿ ಸರಕಾರ ನೇಮಿಸಿದ ಸದಸ್ಯರ ವಿಶ್ವಾಸ ಪಡೆದು ಸಭೆ ಮುಂದುವರಿಸಿದ್ದೇನೆ. ಆದಾಗ್ಯೂ ಅವರು ಕೆಡಿಪಿ ಸಭೆಗೆ ಸಂಬಂಧಿಸಿದ ವಿಚಾರ ಪ್ರಸ್ತಾಪಿಸದೇ, ಹಿಂದಿನ ದಿನ ಖಾಸಗಿ ಸಭೆ ಕರೆದದ್ದು ಹೇಗೆಂದು ಇಲ್ಲಿ ಪ್ರಶ್ನಿಸಿರುವುದು, ಮಿತಿ ಹೇರುವುದು ನನ್ನ ಹಕ್ಕುಚ್ಯುತಿಯಾಗಿದೆ. ಈ ಬಗ್ಗೆ ನಾನು ಕೋರ್ಟ್ ಮೆಟ್ಟಿಲೇರುತ್ತೇನೆ. ಸಭಾಪತಿಗೂ ದೂರು ನೀಡುತ್ತೇನೆ. – ಗುರುರಾಜ ಗಂಟಿಹೊಳೆ, ಶಾಸಕರು
- ಕೆಡಿಪಿ ಸಭೆಯ ನಡಾವಳಿಗೆ ಸಂಬಂಧಿಸಿದಂತೆ ನಾವು ಪ್ರಶ್ನೆ ಎತ್ತಿದ್ದು, ಇದಕ್ಕೆ ಶಾಸಕರು ನಮ್ಮ ಅಧಿಕಾರ ಮಿತಿಯ ಬಗ್ಗೆ ಆರಂಭದಲ್ಲಿಯೇ ಮಾತನಾಡಿದ್ದಾರೆ. ಸರಕಾರದಿಂದ ನಾಮನಿರ್ದೇಶನಗೊಂಡ ನಮಗೂ ಜವಾಬ್ದಾರಿ ಇದ್ದು ಶಾಸಕರ ಹೇಳಿದ ಹಾಗೆ ಮಾತ್ರ ನಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಹಕ್ಕಿಗೂ ಚ್ಯುತಿಯಾಗಿದೆ. ನಾವೂ ನ್ಯಾಯಾಲದ ಮೆಟ್ಟಿಲೇರುತ್ತೇವೆ. – ಜಗದೀಶ ದೇವಾಡಿಗ, ಶೇಖರ ಪೂಜಾರಿ, ತಾಲೂಕು ಕೆಡಿಪಿ ಸದಸ್ಯರು.














