ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮದುಮಗ ನಾಪತ್ತೆಯಾದ ಕಾರಣ ಸೋಮವಾರ ನಡೆಯಬೇಕಾಗಿದ್ದ ಮದುವೆ ರದ್ದುಗೊಂಡ ಘಟನೆ ನಡೆದಿದೆ.
ಉಪ್ಪುಂದದ ಯುವಕನೊಂದಿಗೆ ಮರವಂತೆಯ ಹುಡುಗಿಗೆ ವಿವಾಹ ಸೋಮವಾರ ನಾಗೂರಿನಲ್ಲಿ ನಿಗದಿಯಾಗಿತ್ತು. ಎರಡು ಕಡೆಯವರು ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಹುಡುಗ ಸಹಕಾರಿ ಸಂಘದಲ್ಲಿ ಕೆಲಸ ಮಾಡಿಕೊಂಡಿದ್ದು, ಮನೆಯವರು ಪರಸ್ಪರ ಮಾತು ಕತೆಯ ಮೂಲಕ ಒಪ್ಪಿ ಮದುವೆಗೆ ದಿನ ನಿಶ್ಚಯ ಮಾಡಿದ್ದರು.
ಅದರಂತೆ ಮದುಮಗ ಸೇರಿದಂತೆ ಮನೆಯವರು ಸಕಲ ತಯಾರಿ ಮಾಡಿ ಕೊಂಡಿದ್ದರು.ಆ.18ರಂದು ಹುಡುಗನ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದರು. ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದುಕೊಂಡು, ಮನೆಯಲ್ಲಿ ಇಟ್ಟು ಕೆಲವೊಂದು ವಸ್ತುಗಳನ್ನು ತರಲು ಇದೆ ಎಂದು ಮನೆಯವರಲ್ಲಿ ಹೇಳಿ ಹೋಗಿದ್ದ.
ಮೊಬೈಲ್, ಚಿನ್ನದ ಬ್ರೇಸ್‌ಲೆಟ್‌ನ್ನು ಮನೆಯಲ್ಲಿ ಇಟ್ಟು ಹೋದ ಮದುಮಗ ವಾಪಸ್ ಬಾರದೆ ನಾಪತ್ತೆಯಾಗಿದ್ದಾನೆ. ಮೆಹಂದಿಯ ಸಂಭ್ರಮದಲ್ಲಿದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಹುಡುಗ ನಾಪತ್ತೆ ವಿಷಯ ತಿಳಿದು ಸಂಬಂಧಿಕರು ವಾಪಸ್ ತೆರಳಿದರು.
ಕಾರವಾರದಲ್ಲಿ ಪತ್ತೆ:
ನಾಪತ್ತೆಯಾದ ಯುವಕ ಕಾರವಾರದಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಆತನನ್ನು ಗಂಗೊಳ್ಳಿ ಠಾಣೆಗೆ ಕರೆತಂದು ಯುವತಿ ಹಾಗೂ ಅವರ ಮನೆಯವರೊಂದಿಗೆ ಮಾತುಕತೆ ನಡೆಸಿ ಕಾಲೆ ಅವರವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.















