ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ಅಪೂರ್ಣ ಗ್ರಾಮ ಸಭೆ ನಡೆಸಲಾಗಿದ್ದು ಎರಡರಿಂದ ಮೂರು ಅಜಿಂಡಗಳಿಗೆ ಮಾನ್ಯತೆ ನೀಡಿಲ್ಲ, 2023-24ನೇ ಸಾಲಿನ ಜಮಾ ಖರ್ಚುಗಳನ್ನು ಓದಿ ಹೇಳಿಲ್ಲ, ಮುಂದಿನ ಸಾಲಿನಲ್ಲಿ ಮಾಡುವ ಕ್ರೀಯಾಯೋಜನೆಗಳ ಕಾಮಗಾರಿಗಳ ಪಟ್ಟಿ ಸಭೆಗೆ ತಿಳಿಸಿಲ್ಲ ಹಾಗೂ ಮಂಜೂರಾತಿ ಪಡೆದಿಲ್ಲ, ವಾರ್ಡು ಸಭೆಯ ನಡವಳಿ ಬಗ್ಗೆ ವಿಷಯ ತಿಳಿಸಿಲ್ಲ, ಈ ಎಲ್ಲಾ ಲೋಪಗಳನ್ನು ಮರೆಮಾಚಿಸುವ ಸಲುವಾಗಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಮಾದರಿ ಗ್ರಾಮಸಭೆ ಎಂದು ಬಿಂಬಿಸಿ ಪ್ರಜ್ಞಾವಂತ ಗ್ರಾಮಸ್ಥರ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಕಿರಿಮಂಜೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸುಬ್ಬಣ್ಣ ಶೆಟ್ಟಿ ಆರೋಪಿಸಿದ್ದಾರೆ.
ಅವರು ಬೈಂದೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾಗೂರು ಮಹಾಲಸಾ ಕಲ್ಬರಲ್ ಹಾಲ್‌ನಲ್ಲಿ ನಡೆದ ಗ್ರಾಮಸಭೆಯಲ್ಲಿ ಮೂಲ ಆಶಯಗಳಿಗೆ ವಿರುದ್ಧವಾಗಿ ಅಧ್ಯಕ್ಷರು, ಪಿಡಿಓ, ನೋಡಲ್ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಗ್ರಾಮಸ್ಥರಿಗೆ ಮತನಾಡಲೂ ಅವಕಾಶ ಕೊಡದೇ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಕಾಟಾಚಾರಕ್ಕಾಗಿ ತರಾತುರಿಯಲ್ಲಿ ಗ್ರಾಮಸಭೆಯನ್ನು ಮುಗಿಸಿ ಕೈತೊಳೆದುಕೊಂಡರು ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಪಂನ ಸಾಮಾನ್ಯಸಭೆ ನಡೆಯುತ್ತಿಲ್ಲ. ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಚರ್ಚೆಗಳಿಲ್ಲ, ಪರ-ವಿರೋಧ ದಾಖಲಿಸುವುದಿಲ್ಲ. ಯಾವುದಕ್ಕೂ ನಿರ್ಣಯ ಮಾಡುವುದಿಲ್ಲ. ಮನೆ ತೆರಿಗೆ ಹೆಚ್ಚಳ ಮಾಡಿದ್ದಾರೆ. ಮಾರುಕಟ್ಟೆ ವ್ಯಾಪಾರಸ್ಥರಿಂದ ಶುಲ್ಕ ಪಡೆಯುತ್ತಿಲ್ಲ. ನೀರಿನ ಬಿಲ್ಲು ವಸೂಲಿಯಾಗುತ್ತಿಲ್ಲ. ಯಾವುದಕ್ಕೂ ಟೆಂಡರ್ ಕರೆಯುವ ಪದ್ದತಿಯಿಲ್ಲ. ಕೇವಲ ಮನೆ ತೆರಿಗೆಯಿಂದ ಗ್ರಾಮದ ಅಭಿವೃದ್ಧಿಯಾಗುವುದಿಲ್ಲ. ಆಡಳಿತ ವರ್ಗ ಹಾಗೂ ಪಿಡಿಒ ಶಾಮೀಲಾಗಿದ್ದು, ಏಕವ್ಯಕ್ತಿ ಪ್ರದರ್ಶನ ನೀಡುತ್ತಿದ್ದಾರೆ. ಪಂಚಾಯತ್ ವ್ಯವಸ್ಥೆಯಲ್ಲಿ ಇವರಾಡಿದ್ದೇ ಆಟವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಎಲ್ಲಿಯೂ ಕೂಡ ಇಂತಹ ಘಟನೆಗಳು ನಡೆಯಬಾರದು ಎಂದ ಅವರು, ಮೇಲಿನ ಎಲ್ಲಾ ಅಹವಾಲುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಗ್ರಾಮಸಭೆಯ ವಿಡಿಯೋಗಳನ್ನು ತರಿಸಿ, ಪರಿಶೀಲಿಸಿ ತಪ್ಪಿತಸ್ಥ ಪಂಚಾಯತ್ ಅಧ್ಯಕ್ಷರು, ಪಿಡಿಓ, ನೋಡಲ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಈ ಹಿಂದಿನ ಗ್ರಾಮಸಭೆಯನ್ನು ರದ್ದುಪಡಿಸಿ. ಹೊಸತಾಗಿ ಗ್ರಾಮಸಭೆಯನ್ನು ನಡೆಸುವಂತೆ ಆದೇಶ ಮಾಡಿ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ದಕ್ಕೆಯಾಗದಂತೆ ನ್ಯಾಯ ಕೊಡಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ನೀಡಲಾಗುವುದು ಎಂದರು.
ಕಿರಿಮಂಜೇಶ್ವರ ಗ್ರಾಪಂ ಮಾಜಿ ಸದಸ್ಯ ರಾಮಚಂದ್ರ ಮಾತನಾಡಿ, ಪೂರ್ಣಪ್ರಮಾಣದ ಹಣ ಪಾವತಿಸಿ ಗ್ರಾಮದ ತ್ಯಾಜ್ಯ ಸಂಗ್ರಹಣಾ ವಾಹನ ಖರೀದಿಸಿದ್ದು, ಅದಿನ್ನು ಪಂಚಾಯತ್ ಕೈಸೇರದೇ ಶೋರೂಂನಲ್ಲಿದೆ. ಅದನ್ನು ತಂದರೆ ನಿಲ್ಲಿಸಲು ಸ್ಥಳದ ಕೊರತೆಯ ಕಾರಣ ನೀಡುತ್ತಿರುವುದು ಹಾಸ್ಯಾಸ್ಪದ. ಪಿಡಿಒಗೆ ಆಡಳಿತದ ಅನುಭವದ ಕೊರತೆ ಎದ್ದು ಕಾಣುತ್ತಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದ ಆಗ್ರಹಿಸಿದ ಅವರು, ಗ್ರಾಮಸ್ಥರ ವಿರೋಧದ ಹೊರತಾಗಿಯೂ ಮಾಡುವ ಕಾಮಗಾರಿಗಳಿಗೆ ನಮ್ಮ ಆಕ್ಷೇಪವಿದೆ ಎಂದರು.ಮಾಡಿದರೆ ನಮ್ಮ ಆಕ್ಷೇಪವಿದೆ ಎಂದರು.










