ಸುರಭಿ ರಿ. ಬೈಂದೂರು ಸಂಸ್ಥೆಯ ರಜತಯಾನಕ್ಕೆ ಚಾಲನೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರೆಯುವ – ಮೆರೆಯುವ ಇಂದಿನ ಕಾಲಘಟ್ಟದಲ್ಲಿ ಉದಾತ್ತವಾಗಿ ಚಿಂತನೆ ಮಾಡುವ ಮನಸ್ಸುಗಳು ಬೇಕಾಗಿವೆ. ಮಕ್ಕಳಿಗೆ ನಿಜವಾಗಿಯೂ ಅಗತ್ಯವಿರುವ ಪ್ರೀತಿ, ವಿಶ್ವಾಸ, ವಿಶಾಲ ಮನೋಭಾವವನ್ನು ತುಂಬಲು ಮರೆತಿರುವ ನಾವುಗಳು ಪರಸ್ಪರ ನಂಬಿಕೆಯನ್ನು ಕಳೆದುಕೊಂಡು ಯಾಂತ್ರಿಕ ಜಗತ್ತಿನ ದಾಸರಾಗಿ ಬದುಕುತ್ತಿರುವುದು ವಿಪರ್ಯಾಸ ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ. ಜಯಪ್ರಕಾಶ್ ಮಾವಿನಕುಳಿ ಹೇಳಿದರು.

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಸಂಸ್ಥೆಯ ಬೆಳ್ಳಿ ಹಬ್ಬದ ರಜತ ಲಾಂಛನ ಅನಾವರಣಗೊಳಿಸಿ ಮಾತನಾಡಿದರು. ಧಾವಂತದ ಬದುಕಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಹಿಂದಿಕ್ಕಿ ಹೋಗುತ್ತಿದ್ದೇವೆ. ನೆರೆಯವರ ಮೇಲೆ ಪ್ರೀತಿ ವಿಶ್ವಾಸವಿಡದ ಬದುಕು ನಮ್ಮದಾಗುವುದು ಬೇಡ. ಆಧುನಿಕ ಬದುಕಿನ ಅಗತ್ಯತೆಗಳ ನಡುವೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕು ಸುಂದರವಾಗುತ್ತದೆ ಎಂದ ಅವರು ಸಾಹಿತಿ, ಕಲಾವಿದರು, ಚಿಂತಕರಿಂದ ಊರಿಗೆ ಘನತೆ ಹೆಚ್ಚುತ್ತದೆಯೇ ಹೊರತು ಹಣವಂತರಿಂದ ಅಲ್ಲ ಎಂಬುದನ್ನು ಮರೆಯಬಾರದು ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು ಸುರಭಿ ರಜತಯಾನಕ್ಕೆ ಚಾಲನೆ ನೀಡಿ ಮಾತನಾಡಿ ಸುರಭಿ ಸಂಸ್ಥೆ 25 ವರ್ಷಗಳನ್ನು ಪೂರೈಸುವುದರ ಜೊತೆಗೆ ದೇಶಿ ಚಿಂತನೆ ಹಾಗೂ ಪ್ರಾದೇಶಿಕತೆಗೆ ಚೈತನ್ಯ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸಾಂಸ್ಕೃತಿಕ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡ ಸಂಸ್ಥೆಯ ತನ್ನ ಕಾರ್ಯಗಳ ಮೂಲಕ ಇನ್ನಷ್ಟು ಎತ್ತರಕ್ಕೇರಲಿ ಎಂದರು.


ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಜಯೀಂದ್ರ ಹಂದೆ ಆಶಯ ನುಡಿಗಳನ್ನಾಡಿದರು. ರಂಗಸಂಸ್ಕೃತಿ ಕಾರ್ಕಳದ ಅಧ್ಯಕ್ಷ ನಿತ್ಯಾನಂದ ಪೈ ಅತಿಥಿಗಳಾಗಿದ್ದರು. ಸುರಭಿ ನಿರ್ದೇಶಕ ಗಣಪತಿ ಹೋಬಳಿದಾರ್, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು.
ಸುರಭಿ ರಜತಯಾನ ಲಾಂಛನ ರಚಿಸಿದ ಕಲಾವಿದ ಸುರೇಶ್ ಹುದಾರ್ ಹಾಗೂ ಡಿಜಿಟಲ್ ಆರ್ಟ್ ಮಾಡಿದ ಸಮಷ್ಟಿ ಮೀಡಿಯಾ ವೆಂಚರ್ಸ್ ಸಂಸ್ಥೆಯ ಪ್ರತಿನಿಧಿಯನ್ನು ಗೌರವಿಸಲಾಯಿತು. ನೂತನವಾಗಿ ಸೇರ್ಪಡೆಗೊಂಡ ಸದಸ್ಯರುಗಳನ್ನು ಸ್ವಾಗತಿಸಿಕೊಳ್ಳಲಾಯಿತು.



ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಸ್ತಾವನೆಗೈದರು. ಪೂರ್ಣಿಮಾ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ಸ್ವಾಗತಿಸಿ ನಿಕಟಪೂರ್ವ ಕಾರ್ಯದರ್ಶಿ ಭಾಸ್ಕರ ಬಾಡ ವಂದಿಸಿದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜರ್ನಿ ಥೇಟರ್ ಗ್ರೂಪ್ ಮಂಗಳೂರು ಪ್ರಸ್ತುತಿಯಲ್ಲಿ ರಂಗಾಮೃತ ಜಾನಪದ ಹಾಗೂ ರಂಗ ಸಂಗೀತದ ಪ್ರದರ್ಶನ ಜರುಗಿತು.














