ನರೇಂದ್ರ ಎಸ್. ಗಂಗೊಳ್ಳಿ.
ಹುಚ್ಚ ವೆಂಕಟ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಬಿದ್ದಿರುವುದು ಎಲ್ಲಾ ಚಾನೆಲ್ ಗಳಲ್ಲಿ ಬಿಸಿಬಿಸಿ ಸುದ್ದಿಯಾಗಿ ಓಡಾಡುತ್ತಿದೆ. ಅದ್ಯಾವುದೋ ದೇಶ ಮುಳುಗಿ ಹೋಯಿತು ಅನ್ನೋ ಹಾಗೆ ಅವರ ಅಭಿಮಾನಿಗಳೆನ್ನಿಸಿಕೊಂಡವರು ಪ್ರತಿಕ್ರಿಯಿಸುವ ರೀತಿಯನ್ನು ಮತ್ತು ನಮ್ಮ ಚಾನೆಲ್‌ಗಳ ವಿಪರೀತ ಅನ್ನುವಂತಹ ಆಸಕ್ತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಹುಚ್ಚ ವೆಂಕಟ್ ಅವರೋ ಇವರೋ ಅನ್ನೋ ಸಂದೇಹ ಮೂಡತೊಡಗಿದೆ. ವೆಂಕಟ್, ರೆಹಮಾನ್. ರವಿ ಹಾಗೂ ಇನ್ನಿತರರು ಮಾಡಿದ್ದು ಸರಿಯೋ ತಪ್ಪೋ ಅನ್ನೋ ವಿಚಾರಕ್ಕಿಂತ ನಮ್ಮಲ್ಲಿನ ಹುಚ್ಚುತನವೇ ಇಲ್ಲಿ ಎದ್ದು ಕಾಣುತ್ತಿದೆ.
ನಿಜ ಬಿಗ್ ಬಾಸ್ ಎಲ್ಲಾ ರಿಯಾಲಿಟಿ ಶೋಗಳ ಹಾಗೆ ಒಂದು ತರ್ಕ ಹೀನ ರಿಯಾಲಿಟ ಶೋ. ಹೀಗೆ ಕರೆಯಲೂ ಒಂದು ಕಾರಣವಿದೆ. ಇಲ್ಲಿನ ಬಹುತೇಕ ಕಾರ‍್ಯಕ್ರಮಗಳಲ್ಲಿ ಭಾಗಾಳುಗಳ ನಿರ್ವಹಣೆಯನ್ನು ಪರಿಶೀಲಿಸಿ(?) ಅಂಕಗಳನ್ನು ಕೊಡಲು ಒಂದಷ್ಟು ಗಣ್ಯರೆನ್ನಿಸಿಕೊಂಡ ತೀರ್ಪುಗಾರರಿರುತ್ತಾರೆ. ಆದರೆ ಪ್ರತೀ ಕಾರ‍್ಯಕ್ರಮದಲ್ಲೂ ಇವರಿಗೆ ವೋಟ್ ಮಾಡಲು ವೀಕ್ಷಕರನ್ನು ಕೇಳಿಕೊಳ್ಳಲಾಗುತ್ತದೆ. ಮತ್ತೆ ನಮ್ಮ ಮೂರ್ಖ ಜನತೆ ಅದಕ್ಕೆ ವೋಟು ಮಾಡುತ್ತಾರೆ ಮತ್ತು ಹಾಗೆ ವೋಟು ಮಾಡಿದಾಗೆಲ್ಲಾ ತಮ್ಮ ಮೊಬೈಲ್‌ನಿಂದ ಪ್ರತೀಬಾರಿ ಕನಿಷ್ಠ 3 ರೂಪಾಯಿಯಿಂದ ಹತ್ತು ರೂಪಾಯಿಯ ತನಕವೂ ಹಣವನ್ನು ಕಳೆದುಕೊಳ್ಳುತ್ತಾರೆ. ಅಲ್ಲಿ ದುಡ್ಡು ಕಳೆದುಕೊಳ್ಳುವ ಜನ ಭಿಕ್ಷುಕಿಯ ಕಂಕುಳಲ್ಲಿ ಹಸಿವಿನಿಂದ ರೋದಿಸುತ್ತಿರುವ ಪುಟ್ಟ ಮಗುವಿಗೆ ಒಂದು ರೂಪಾಯಿ ನೀಡಲು ಹಿಂದೆಮುಂದೆ ನೋಡುತ್ತಾರೆ ಅನ್ನುವುದು ಬೇರೆ ಮಾತು. ಹೋಗಲಿ ಬಿಡಿ. ವಿಷಯಕ್ಕೆ ಬನ್ನಿ. ಅಲ್ಲಾರೀ ನಾವು ವೋಟು ಹಾಕಿ ಸ್ಪರ್ಧೆಯ ಭಾಗಾಳುಗಳು ಗೆಲ್ಲುವುದಾದರೆ ಅಲ್ಲಿ ತೀರ್ಪುಗಾರರಾದರು ಯಾಕಿರಬೇಕು? ಅವರ ಅಂಕಗಳಾದರೂ ಯಾಕೆ ಬೇಕು? ಇಂತಹ ಎಷ್ಟೋ ಕಾರ್ಯಕ್ರಮಗಳಲ್ಲಿ ಪ್ರಶಸ್ತಿಗಳು ಅಪಾತ್ರರ ಪಾಲಾಗಿದ್ದನ್ನು ನಾವು ಕಂಡಿದ್ದೇವೆ. ಆಗೆಲ್ಲಾ ಮೋಸ ಮೋಸ ಅಂತ ನಾವು ನಮ್ಮಷ್ಟಕ್ಕೆ ಅಲವತ್ತುಕೊಳ್ಳುತ್ತೇವೆ. ಸ್ನೇಹಿತರ ಜೊತೆ ಅಸಹನೆಯನ್ನು ಹೊರಹಾಕುತ್ತೇವೆ. ಗೆದ್ದವರು ಮತ್ತು ಸೋತವರು ಇಬ್ಬರೂ ಮನೇಲಿ ಹಾಯಾಗಿರುತ್ತಾರೆ. ಅಷ್ಟಕ್ಕೂ ನಮ್ಮ ಮಾತಿಗೇನು ಬೆಲೆ ಸಿಗುತ್ತೇ ಅಂತ ಮಾತನಾಡುತ್ತೀವೋ ನನಗಂತೂ ಗೊತ್ತಿಲ್ಲ. ಕೇಳೋರು ಯಾರು? (ಕುಂದಾಪ್ರ ಡಾಟ್ ಕಾಂ ಲೇಖನ)
ಇದೇ ಸಾಲಿಗೆ ಸೇರಿರುವುದು ಈಗ ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಎನ್ನುವ ಕಾರ‍್ಯಕ್ರಮ. ದೊಡ್ಡವರೆನ್ನಿಸಿಕೊಂಡವರ ಮುಖವಾಡವನ್ನು ಕಳಚುತ್ತೇವೆ ಎನ್ನುವ ಹುಚ್ಚು ಭ್ರಮೆಯಲ್ಲಿರುವ ಈ ಕಾರ‍್ಯಕ್ರಮ ಈ ಹಿಂದೆ ಎರಡು ಆವೃತ್ತಿ ನಡೆದಿದ್ದು ಇದೀಗ ಮೂರನೇ ಆವೃತ್ತಿ ಪ್ರಸಾರವಾಗುತ್ತಿದೆ. ಬೇರೆಯವರ ಜೀವನದ ಬಗೆಗೆ ಇಣುಕಿ ನೋಡುವಂತಹ ಅವರ ವೈಯಕ್ತಿಕ ಚಟುವಟಿಕೆಗಳನ್ನು ನೋಡುವ ಮತ್ತು ಅವರ ವೈಯಕ್ತಿಕ ಮಾತುಗಳನ್ನು ಕೇಳಿಸಿಕೊಳ್ಳುವಂತಹ ಕೆಟ್ಟ ಪ್ರವೃತ್ತಿಯನ್ನು ವೀಕ್ಷಕರಲ್ಲಿ ಈಗಾಗಲೇ ಬೆಳೆಸಿರುವ ಈ ಕಾರ‍್ಯಕ್ರಮದ ವಿಜೇತರನ್ನು ಕೂಡ ಪ್ರೇಕ್ಷಕರೇ ವೋಟುಗಳ ಮೂಲಕ ಆಯ್ಕೆ ಮಾಡುತ್ತಾರೆ ಎನ್ನುವ ವಿಚಾರ ಕಾರ‍್ಯಕ್ರಮದ ಡೋಂಗೀತನವನ್ನು ಸಾಬೀತುಮಾಡುತ್ತಿದೆ.. ಪ್ರತೀಬಾರಿ ವೀಕ್ಷಕರ ಕೆಟ್ಟ ಕುತೂಹಲವನ್ನು ಮತ್ತಷ್ಟು ಕಾಯ್ದಿಟ್ಟುಕೊಳ್ಳಲು ವಿವಾದಿತ ವ್ಯಕ್ತಿಗಳನ್ನು ಬೇಕೆಂದೇ ಆಯ್ದುಕೊಳ್ಳುವ, ಬಿಗ್‌ಬಾಸ್ ಹೆಸರಿನ ಮನೆಯಲ್ಲಿ ನಡೆಯುವ ಸ್ಪರ್ಧಿಗಳ ನಡುವಣ ರಂಪ ರಗಳೇ ರಾದ್ಧಾಂತಗಳನ್ನು ಎತ್ತಿತೋರಿಸಿ ವೈಭವೀಕರಿಸುವ ಮತ್ತು ಆ ಮೂಲಕ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವ ಬಿಗ್‌ಬಾಸ್ ನಲ್ಲಿ ಈ ಸಲ ವಿಶೇಷವಾಗಿ ಕಾಣಿಸಿಕೊಂಡಿದ್ದು ಹುಚ್ಚ ವೆಂಕಟ್ ಎನ್ನುವ ಹೆಸರಿನ ಸಿನಿಮಾ ರಂಗದ ವ್ಯಕ್ತಿ. (ಕುಂದಾಪ್ರ ಡಾಟ್ ಕಾಂ ಲೇಖನ)
ಹುಚ್ಚ ವೆಂಕಟ್ ಅದು ಆ ವ್ಯಕಿಯೇ ಇಟ್ಟುಕೊಂಡ ಹೆಸರು ಆದ್ದರಿಂದ ಬೇರೆಯವರನ್ನು ಆ ಬಗೆಗೆ ದೂಷಿಸುವಂತಲ್ಲ. ಹಿಂದೊಮ್ಮೆ ಕನ್ನಡ, ಪ್ರೀತಿ ಮತ್ತು ತಾಯಿ ಸೆಂಟಿಮೆಂಟ್ ಗಳನ್ನು ಆಳವಡಿಸಿಕೊಂಡು ಚಿತ್ರವೊಂದನ್ನು ತಯಾರಿಸಿದಾಗ ಕನ್ನಡದ ಜನರು ಇವರನ್ನು ಕ್ಯಾರೇ ಅಂದಿರಲಿಲ್ಲ. ಅದೇ ಕಾರಣಕ್ಕೆ ಇಡೀ ಕನ್ನಡದ ಪ್ರೇಕ್ಷಕರನ್ನು ಬೈಯ್ದು ತನ್ನ ಎಕ್ಕಡಕ್ಕೆ ಹೋಲಿಸಿದ್ದ ಈ ವ್ಯಕ್ತಿ ನಿಜಕ್ಕೆಂದರೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಬೇಕಿತ್ತು. ಆದರೆ ನಮ್ಮವರಿಗೆ ಅದೇನು ಪ್ರೀತಿಯೋ. ಅವನನ್ನು ನೋಡಿ ನಕ್ಕು ಸುಮ್ಮನಾಗಿಬಿಟ್ಟರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆತನ ಬೈಯ್ಯುವ ಶೈಲಿಯನ್ನು ನೋಡಿ ಅವನ ಅಭಿಮಾನಿಗಳು ಅಂತ ಒಂದಷ್ಟು ಜನ ಹುಟ್ಟಿಕೊಂಡುಬಿಟ್ಟರಲ್ಲ ಅಲ್ಲಿಗೆ ವೆಂಕಟರಿಗೆ ಆನೆ ಬಲ ಬಂದಂತಾಗಿತ್ತು. ಅವರ ವಿಚಿತ್ರ ಅನ್ನಿಸುವಂತಹ ಹೇಳಿಕೆಗಳು ಸ್ವಲ್ಪ ಜಾಸ್ತಿಯಾದವು.
ಸಂದೇಹವೇ ಬೇಡ. ವೆಂಕಟ್‌ರಲ್ಲಿ ನಿಜಕ್ಕೂ ಒಂದು ಒಳ್ಳೆಯ ಮನಸ್ಸಿದೆ. ಭಾರತೀಯ ಸಂಸ್ಕೃತಿಯ ಬಗೆಗೆ ಒಂದಷ್ಟು ಕಾಳಜಿ, ಸ್ತ್ರೀಯರ ಬಗೆಗೆ ವಿಶೇಷ ಅಭಿಮಾನವೂ ಇದೆ. ಅವರ ಕೆಲವು ಮಾತುಗಳಲ್ಲಿ ಅರ್ಥವೂ ಇದೆ. ಆದರೆ ಸಮಸ್ಯೆ ಇರುವುದು ಅವರ ಅಭಿವ್ಯಕ್ತಿಯ ಶೈಲಿಯಲ್ಲಿ. ಒಂದು ವಿಚಾರವನ್ನು ಯಾರು ಯಾವಾಗ ಯಾವ ಕಾಲದಲ್ಲಿ ಹೇಳುತ್ತಾರೆ ಎನ್ನುವುದರ ಜೊತೆಗೆ ಅದನ್ನು ಹೇಗೆ ಹೇಳುತ್ತಾರೆ ಅನ್ನುವುದು ಮುಖ್ಯ. ವೆಂಕಟ್ ಗೆ ತಾಯಿ ಮೇಲೆ ಅಪಾರ ಪ್ರೀತಿ. ಅವರನ್ನು ಕಳೆದುಕೊಂಡ ಮೇಲೆ ಮತ್ತು ತನ್ನ ಸಿನೆಮಾ ನೆಲಕಚ್ಚಿದ ಬಳಿಕ ವೆಂಕಟ್‌ರನ್ನು ಬಹುಮಟ್ಟಿಗೆ ಡಿಪ್ರೆಶನ್ ಕಾಡುತ್ತಿರುವುದು ಹೌದು. ಹಾಗಾಗಿ ಅವರ ವರ್ತನೆಗಳು ಮಾತುಗಳು ಅತಿರೇಕ ಅನ್ನಿಸುವಂತಿರುತ್ತವೆ ಅನ್ನುವುದನ್ನು ಅವರ ಕುಟುಂಬಸ್ಥರು ಒಪ್ಪಿಕೊಳ್ಳುತ್ತಾರೆ. ಜೊತೆ ಜೊತೆಗೆ ಅವರ ಮನಸ್ಥಿತಿಯ ಬಗೆಗೆ ಸಂದೇಹಗಳು ಹುಟ್ಟಿಕೊಳ್ಳುತ್ತವೆ. ಅದೇನೆ ಇದ್ದರೂ ಬಹಳ ಸಲ ಅವರ ಅಭಿಪ್ರಾಯಗಳ ಅಭಿವ್ಯಕ್ತಿಯ ಶೈಲಿಯನ್ನು ಸಭ್ಯಸ್ಥರಾದ ಯಾರೂ ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಂತೂ ಸತ್ಯ. (ಕುಂದಾಪ್ರ ಡಾಟ್ ಕಾಂ ಲೇಖನ)
ಸರಿ. ಅಂತಹ ವ್ಯಕ್ತಿಯನ್ನು ಬಿಗ್‌ಬಾಸ್ ಗೆ ಕರೆತಂದುದರ ಉದ್ದೇಶ ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ ಅನಿರೀಕ್ಷಿತವಾಗಿ ರವಿ ಅನ್ನುವ ಸ್ಫರ್ಧಿಗೆ ಹೊಡೆದು ಬಿಗ್ ಬಾಸ್ ನಿಂದ ಹೊರಹೋದ ಸುದ್ದಿ ಬಂದಿದೆ. ಮತ್ತೆ ವಾಪಾಸಾದರೂ ಅಚ್ಚರಿಯೇನಿಲ್ಲ. ಆದರೆ ಹುಚ್ಚ ವೆಂಕಟ್ ಆಗಮನ ನಿರ್ಗಮನ ಎರಡರ ನಂತರದ ಬೆಳವಣಿಗೆಗಳು ಇವೆಯಲ್ಲ ಅದು ನಿಜಕ್ಕೂ ಆತಂಕವನ್ನು ಹುಟ್ಟುಹಾಕುತ್ತಿದೆ. ಒಂದು ಕೆಟ್ಟ ಶೈಲಿಯ ಜನಪ್ರಿಯತೆಯನ್ನು ವೈಭವೀಕರಿಸಿ ಅದಕ್ಕೆ ಮತ್ತಷ್ಟು ಅಭಿಮಾನಿಗಳು ಹುಟ್ಟಿಕೊಳ್ಳಲು ಕಾರಣವಾದ ಈ ಕಾರ‍್ಯಕ್ರಮ ನಿಜಕ್ಕೂ ಅಗತ್ಯವಿತ್ತಾ? ನಿನನ್ಮಗಂದ್, ನನ್ ಎಕ್ಕಡ ಅನ್ನೋ ವೆಂಕಟ್‌ರ ಟ್ರೇಡ್ ಮಾರ್ಕಿನಂತಿರುವ ಮಾತುಗಳೆಲ್ಲಾ ಪಡ್ಡೆ ಹುಡುಗರು ಹುಡುಗಿಯರಿಂದ ಹಿಡಿದು ಸುತ್ತ ಮುತ್ತಲಿನ ಸಣ್ಣ ಮಕ್ಕಳ ಬಾಯಲ್ಲೂ ಪದೇ ಪದೇ ಕೇಳಿ ಬರುತ್ತಿರುವುದು ಮತ್ತು ಬಹಳ ಜನ ವೆಂಕಟ್ ಶೈಲಿಯನ್ನು ಅನುಸರಿಸುತ್ತಿರುವುದು ಮತ್ತು ಇಂತಹ ವರ್ತನೆಗಳನ್ನೆಲ್ಲಾ ನಾವುಗಳು ನಕ್ಕು ಪ್ರೋತ್ಸಾಹಿಸುತ್ತಿರುವುದು ಎಷ್ಟು ಸರಿ ಅನ್ನೋದನ್ನು ನಾವು ಚಿಂತಿಸಬೇಕಿದೆ. ಬಿಗ್‌ಬಾಸ್ ನಲ್ಲಿರುವ ಸೋಕಾಲ್ಡ್ ಗಣ್ಯರು ಕೂಡ ವೆಂಕಟರ ಅನುಸರಿಸಬಾರದ ಮ್ಯಾನರಿಸಂನ್ನು ಅನುಸರಿಸುತ್ತಿರುವುದು ಅದೇ ವಿಷಯವನ್ನು ಪದೇ ಪದೇ ಪ್ರಸ್ತಾಪ ಮಾಡುವುದು ಎಲ್ಲವೂ ಒಂದಿಡೀ ಪ್ರೇಕ್ಷಕ ವರ್ಗವನ್ನು ಅಡ್ಡದಾರಿಗೆ ಕೊಂಡೊಯ್ಯುತ್ತಿರುವುದು ಸುಳ್ಳಲ್ಲ. ಅಂತಹ ಮ್ಯಾನರಿಸಂಗಳನ್ನು ಪ್ರೋತ್ಸಾಹಿಸಬಾರದು ಅನ್ನೋ ಕನಿಷ್ಠ ತಿಳುವಳಿಕೆ ನಮಗಿಲ್ಲದೆ ಹೋದದ್ದು ಹೇಗೆ?
ಇನ್ನು ಆ ಹೆಸರಿನಲ್ಲೊಂದು ಅಭಿಮಾನಿ ಸಂಘ ಕಟ್ಟಿಕೊಂಡು ಸುಮ್ಮನೆ ಬ್ಯಾನರ್ ಹಿಡಿದು ಫೋಸು ಕೊಡೋದಿದೆಯಲ್ಲಾ ಅದು ನಮ್ಮ ವಿಚಾರಹೀನತೆಯ ಪರಮಾವಧಿಯಲ್ಲದೆ ಬೇರೇನೂ ಅಲ್ಲ. ಬದಲಿಗೆ ಅದೇ ಹೆಸರಿನಲ್ಲಿ ಒಂದಿಷ್ಟು ಉತ್ತಮ ಕಾರ್ಯಗಳನ್ನು ಮಾಡಿದರೆ ಅದು ಖಂಡಿತಾ ಸ್ವಾಗತಾರ್ಹ. ಬಿಗ್‌ಬಾಸ್ ಮನೆ ಹುಚ್ಚವೆಂಕಟ್‌ರಂತಹ ವ್ಯಕ್ತಿಗೆ ಹೇಳಿಸಿದ್ದಾಗಿರಲಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗಿದ್ದೂ ಅವರನ್ನು ಅಲ್ಲಿ ಒಪ್ಪಿಕೊಳ್ಳಲಾಯಿತು. ಒಟ್ಟಿನಲ್ಲಿ ಹುಚ್ಚ ವೆಂಕಟರ ಹೆಸರಿನಲ್ಲಿ ಬಿಗ್‌ಬಾಸ್ ಅನ್ನೋ ಕಾರ‍್ಯಕ್ರಮ ಜನರನ್ನು ಮತ್ತೆ ಮತ್ತೆ ಮೂರ್ಖರನ್ನಾಗಿಸಿದ್ದು ಸತ್ಯ. ಒಂದು ಮಾಹಿತಿಯಂತೆ ಅಲ್ಲಿರುವ ಪ್ರತಿಯೊಬ್ಬ ಸ್ಫರ್ಧಿಗಳು ಕೂಡ ಬಿಗ್‌ಬಾಸ್ ಜೊತೆ ಪೂರ್ವ ನಿರ್ಧರಿತ ಒಪ್ಪಂದ ಮಾಡಿಕೊಂಡು ಪ್ರತೀ ವಾರಕ್ಕೆ ಇಂತಿಷ್ಟು ಲಕ್ಷ ಸಂಭಾವನೆ ಪಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೊಸ ಮುಖಗಳಿಗೆ ಇಲ್ಲಿ ಅವಕಾಶವಿಲ್ಲ. ಇವರಿಗೆ ಸೋ ಕಾಲ್ಡ್ ಸೆಲೆಬ್ರಿಟಿಗಳೇ ಬೇಕು. ಗಮನಿಸಬೇಕಾದ ಸಂಗತಿಯೆಂದರೆ ಎಲ್ಲವೂ ಪೂರ್ವ ನಿರ್ಧರಿತವಾಗಿರುವಂತೆ ಕಾಣಿಸುವ ಈ ಕಾರ‍್ಯಕ್ರಮದ ಬಗೆಗೆ 24 ಗಂಟೆಗಳಲ್ಲಿ ನಡೆದಿದ್ದನ್ನು ಕೇವಲ ಒಂದು ಗಂಟೆ ಕುಳಿತು ನೋಡುವ (ಅದು ಕೂಡ ಅವರು ತೋರಿಸಿದಷ್ಟನ್ನು ಮಾತ್ರ ) ವೀಕ್ಷಕ ಮಹಾಶಯ ಅದರ ಆಧಾರದ ಮೇಲೆ ಹಾಗಾಗುತ್ತೆ ಹೀಗಾಗುತ್ತೆ ಅಂತ ಲೆಕ್ಕಚಾರ ಹಾಕುವಾಗ ಎಂತಹ ಮೂರ್ಖನಿಗೂ ನಗಬೇಕೆನ್ನಿಸುತ್ತದೆ. ಹುಚ್ಚ ವೆಂಕಟ್ ಶೋ ಬಿಟ್ಟು ಹೊರ ಬಂದರೆ, ಹೋದರೆ ಅನ್ನೋದನ್ನು ಚಿಂತಿಸುವ ಮೊದಲು ನಮ್ಮಲ್ಲಿನ ಹುಚ್ಚುತನ ಯಾವಾಗ ಬಿಟ್ಟು ಹೋಗುತ್ತೆ ಅನ್ನೋದರ ಬಗೆಗೆ ಮೊದಲು ಚಿಂತಿಸಬೇಕಾಗಿದೆ. (ಕುಂದಾಪ್ರ ಡಾಟ್ ಕಾಂ ಲೇಖನ)
ಮುಗಿಸುವ ಮುನ್ನ: ಎಲ್ಲರೂ ಬಿಗ್ ಬಾಸ್ ನಡೆಸಿಕೊಡುತ್ತಿರುವುದು ಸುದೀಪ್ ಅಂತಂದುಕೊಂಡಿದ್ದಾರೆ. ಆದರೆ ಅದು ತೆರೆ ಮೇಲೆ ಮಾತ್ರ. ನಿಮಗೆ ಗೊತ್ತಿರಲಿ ಇಡೀ ಬಿಗ್ ಬಾಸ್ ನಡೆಯುತ್ತಿರುವುದು ನಮ್ಮ ಮೂರ್ಖ ಜನಗಳು ಮಾಡುವ ಎಸ್ಸೆಮ್ಮೆಸ್ಸು ಮತ್ತು ಜಾಹೀರಾತುಗಳಿಂದ ಬರುವ ಆದಾಯದಿಂದ. ಅಷ್ಟೂ ಜನ ಎಸ್ಸೆಮ್ಮೆಸ್ ಮಾಡೋದನ್ನು ನಿಲ್ಲಿಸಿಬಿಟ್ಟರೆಂದರೆ ಬಿಗ್ ಬಾಸ್ ಅದೇ ದಿನ ಕೊನೆಯಾಗಬಹುದು. ನಾವ್ಯಾರು ಅದನ್ನು ಕೇಳೋದಿಲ್ಲ. ನಮಗೆ ಬಿಗ್ ಅಲ್ಲದಿದ್ದರೆ ಮತ್ತೊಂದು ಸ್ಮಾಲ್ ಅಂತ ಇರುತ್ತದೆ. ಇಷ್ಟೆಲ್ಲಾ ಗೊತ್ತಿದ್ದೂ ನಾವು ಬಿಗ್ ಬಾಸ್‌ನ್ನು ಆಸ್ವಾದಿಸುತ್ತಿದ್ದೇವೆಂದರೆ ನಿಜವಾದ ಹುಚ್ಚರು ಯಾರು ಅನ್ನೋದಕ್ಕೆ ನನ್ನಲ್ಲಿ ಯಾವುದೇ ಸಂದೇಹ ಉಳಿದಿಲ್ಲ. ಏನಂತೀರಿ!
[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]