ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮನುಷ್ಯನ ಹೊರನೋಟದ ಲಕ್ಷಣಗಳಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಮೂರ್ಖತನ. ಒಬ್ಬರ ಪ್ರತಿಭೆಯನ್ನು ಕೌಶಲ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ಅಭಿನಂದಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಯುವ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾದ ದೀಕ್ಷಿತ್ ಮೇಸ್ತ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸೂರಜ್ ಸಾರಂಗ ಇವರ ಮುತುವರ್ಜಿಯಲ್ಲಿ ನಡೆದ ಕ್ರೀಡಾ ತರಬೇತುದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ರಂಗದಲ್ಲಿ ಉಪಕಾರ ಮಾಡಿದವರನ್ನು ಸ್ಮರಿಸುವುದು ಮತ್ತು ಗೌರವಿಸುವ ಸಂಪ್ರದಾಯವು ಸಮಾಜದಲ್ಲಿ ಉತ್ತಮ ನಡವಳಿಕೆಯನ್ನು ಪ್ರೋತ್ಸಾಹಿಸುವುದಕ್ಕೆ ನೆರವಾಗುತ್ತದೆ. ಇದು ಎಲ್ಲರ ನಡೆಯಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಿದ ತರಬೇತುದಾರರನ್ನು ಮತ್ತು ಕ್ರೀಡಾ ಕೂಟಕ್ಕೆ ಪ್ರೋತ್ಸಾಹ ನೀಡಿದವರನ್ನು ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿ ಕ್ರೀಡಾ ಪ್ರತಿಭೆಗಳನ್ನು ಅಭಿನಂದಿಸಲಾಯಿತು.
ದೈಹಿಕ ಶಿಕ್ಷಣ ಮಾರ್ಗದರ್ಶಕರಾದ ದೀಕ್ಷಿತ್ ಮೇಸ್ತ ಮತ್ತು ಸೂರಜ್ ಸಾರಂಗ ಶುಭ ಹಾರೈಸಿದರು. ಸಹನಾ ಖಾರ್ವಿ ಮತ್ತು ಸಂಜನಾ ಖಾರ್ವಿ ಪ್ರಾರ್ಥನೆಯನ್ನು ಮಾಡಿದರು. ವಿದ್ಯಾರ್ಥಿನಿ ಕ್ಷಮಾ ಆರ್. ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಹಳೆ ವಿದ್ಯಾರ್ಥಿನಿ ಶ್ರೇಯಾ ಮೇಸ್ತ ವಂದಿಸಿದರು.